ಕೇಸರಿ ಟೀ ಶರ್ಟ್, ಮಾಸ್ಕ್ ಗೊಂದಲ: ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು, ನ.3: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಟೀ ಶರ್ಟ್, ಮಾಸ್ಕ್ ಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು.
ಇಲ್ಲಿನ ಕೊಟ್ಟಿಗೆಪಾಳ್ಯ ವಾರ್ಡ್ ನಲ್ಲಿ ಬೆಳಗ್ಗೆಯೇ ಕೇಸರಿ ಟೀ ಶರ್ಟ್ ಮತ್ತು ಮಾಸ್ಕ್ ಧರಿಸಿದ್ದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅವಗಳನ್ನು ತೆಗೆಸುವಂತೆ ಪೊಲೀಸರು ಮತ್ತು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಮನವೊಲಿಕೆಗೆ ಮುಂದಾದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಪಕ್ಷದ ಬಾವುಟವನ್ನು ಹೋಲುವ ರುಮಾಲು ಧರಿಸಿದರು.
ಈ ನಡುವೆ ಕೇಸರಿ ಟೀ ಶರ್ಟ್ ಧರಿಸಲು ಆಯೋಗದ ನಿರ್ಬಂಧವಿಲ್ಲ ಎಂದಿರುವ ಬಿಜೆಪಿ, ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಈ ಮಧ್ಯೆ ಮತಗಟ್ಟೆಯಲ್ಲಿ ಭದ್ರತೆ ನಿಯೋಜಿಸಿದ್ದ ಅರೆಸೇನಾ ಪಡೆ ಸಿಬ್ಬಂದಿಯೊಬ್ಬರು ಧರಿಸಿದ್ದ ಕೇಸರಿ ಮಾಸ್ಕ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತೆಗೆಸಿ ಬಳಿಕ ಅವರಿಗೆ ನೀಲಿ ಮಾಸ್ಕ್ ಹಾಕಿಸಿದ್ದು ನಡೆಯಿತು.