ಸೋಲಿನ ಭೀತಿಯಿಂದ ಹಲವು ಮತಗಟ್ಟೆಗಳಲ್ಲಿ ಅಕ್ರಮ: ಕೈ ಅಭ್ಯರ್ಥಿ ಕುಸುಮಾ ತಂದೆ ಆರೋಪ

Update: 2020-11-03 13:11 GMT

ಬೆಂಗಳೂರು, ನ. 3: ಬಿಜೆಪಿ ಅಭ್ಯರ್ಥಿ ಮುನಿರತ್ನ ಸೋಲಿನ ಭಯದಿಂದ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಅಕ್ರಮ ನಡೆಸಲು ಪ್ರಾರಂಭಿಸಿದ್ದಾರೆಂದು ನಮ್ಮ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ತಂದೆ ಹನುಮಂತರಾಯಪ್ಪ ಇಂದಿಲ್ಲಿ ಆರೋಪಿಸಿದ್ದಾರೆ.

ಮಂಗಳವಾರ ಕ್ಷೇತ್ರದ ವಿವಿಧೆಡೆ ಹಲವು ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರದ ವಿವಿಧ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಮತದಾರರು ಅತ್ಯಂತ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ, ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ಅಕ್ರಮ ನಡೆಸುತ್ತಿದ್ದಾರೆಂಬ ಮಾಹಿತಿ ಇದೆ ಎಂದು ದೂರಿದರು.

ಇಲ್ಲಿನ ಕೊಟ್ಟಿಗೆಪಾಳ್ಯ ವಾರ್ಡ್ ನ ಮಾಳಗಾಳದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಿ.ಮೋಹನ್ ಕುಮಾರ್ ಭಾಮೈದ ಹಾಗೂ ಅವರ ಸಹೋದರ ರಾಜಾರೋಷವಾಗಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಒಂದು ಮತಕ್ಕೆ ಎರಡು ಸಾವಿರ ರೂ.ಹಂಚಿಕೆ ಮಾಡ್ತಿದ್ದಾರೆಂಬ ದೂರು ಬಂದಿದೆ. ಈ ಸಂಬಂಧ ಈಗಾಗಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಆಮಿಷಗಳಿಂದ ಉಪಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರು ಇಂತಹ ಅಭ್ಯರ್ಥಿಯನ್ನು ತಿರಸ್ಕಾರ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಹಣ ಸೇರಿದಂತೆ ಇನ್ನಿತರ ಆಮಿಷಗಳಿಂದ ಮತದಾರ ಪ್ರಭುಗಳನ್ನು ಖರೀದಿಸಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಇಂದು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದ್ದಾರೆ. ಇದಕ್ಕೆ ಅವರಲ್ಲಿನ ಸೋಲಿನ ಭೀತಿಯೆ ಮೂಲ ಕಾರಣ ಎಂದು ಹನುಮಂತರಾಯಪ್ಪ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News