×
Ad

ನ.19ರಿಂದ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ', ಪ್ರಧಾನಿಯಿಂದ ಉದ್ಘಾಟನೆ: ಡಾ.ಅಶ್ವತ್ಥ ನಾರಾಯಣ

Update: 2020-11-04 21:02 IST

ಬೆಂಗಳೂರು, ನ. 4: ಮಹಾಮಾರಿ ಕೋವಿಡ್-19 ಸೋಂಕಿನ ಆತಂಕ ನಡುವೆ ಹೊಸ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಪ್ರಗತಿಗೆ ಒತ್ತು ನೀಡಲು `ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020' ನ.19ರಿಂದ 21ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಶೃಂಗಸಭೆಯ 23ನೆ ಆವೃತ್ತಿಯು ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆ ಉದ್ಘಾಟಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಈ ಶೃಂಗಸಭೆಯಲ್ಲಿ 25ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಶೃಂಗಸಭೆ ಕರ್ನಾಟಕದ ಪ್ರಮುಖ ತಂತ್ರಜ್ಞಾನ ಸಮಾವೇಶವಾಗಿರದೇ ಇಡೀ ದೇಶದ ಪ್ರಮುಖ ಶೃಂಗಸಭೆಯಾಗಿ ಮಾರ್ಪಟ್ಟಿದೆ. ಇಡೀ ವಿಶ್ವವು ಪಿಡುಗಿನ ಸವಾಲನ್ನು ಎದುರಿಸುತ್ತಿದ್ದರೂ ಈ ಶೃಂಗಸಭೆ ನಿಗದಿಯಂತೆ ನಡೆಯುತ್ತಿದೆ. ವರ್ಚುವಲ್ ಸ್ವರೂಪದಲ್ಲಿ ನಡೆಯುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ ಎಂದರು.

ಜಗತ್ತಿನೆಲ್ಲೆಡೆ ಗಮನ ಸೆಳೆದಿರುವ `ಬೆಂಗಳೂರು ತಂತ್ರಜ್ಞಾನ ಮೇಳ' 23ನೆ ಆವೃತ್ತಿ ಇದಾಗಿದೆ. ಆನ್‍ಲೈನ್ ಮೂಲಕ ನಡೆಯಲಿರುವ ಈ ಮೇಳಕ್ಕೆ ಅದಕ್ಕೂ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಪೂರ್ವಭಾವಿ ಉದ್ಘಾಟನೆ ನೆರವೇರಿಸಿದ ಅಶ್ವತ್ಥ ನಾರಾಯಣ, ವಿಜ್ಞಾನ ಹಾಗೂ ತಾಂತ್ರಿಕತೆ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಜ್ಯ ಸರಕಾರವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ `ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ'ವನ್ನು ಸ್ಥಾಪಿಸಲಿದೆ ಎಂದು ಪ್ರಕಟಿಸಿದರು.

ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಲು ಒತ್ತು, ರಾಜ್ಯದ ಸುಮಾರು 60ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಚಿಂತೆಗೀಡು ಮಾಡುವ ಅಂಶ. ರಾಜ್ಯದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಈಗ ಕೇವಲ ಶೇ.16ರಷ್ಟಿದೆ. ಇದು ಇನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ.30ರಷ್ಟರ ವರೆಗಾದರೂ ಬೆಳೆಯಲೇಬೇಕು. ಆಗ ಮಾತ್ರ ಹಳ್ಳಿಗರ ವಲಸೆ ತಪ್ಪುವ ಜೊತೆಗೆ ಬೆಂಗಳೂರಿಗೆ ಹೊರತಾದ ಪ್ರದೇಶಗಳೂ ಬೆಳವಣಿಗೆ ಕಾಣುತ್ತವೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಜೈವಿಕ ತಂತ್ರಜ್ಞಾನದ ಬೆಳವಣಿಗೆಯು ಕೃಷಿ ಹಾಗೂ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟು ಮಾಡಲಿದೆ. ಇದನ್ನು ಬಳಸಿಕೊಂಡು ಆಹಾರೋತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತಿತರ ವಿಧಾನಗಳ ಮೂಲಕ ವ್ಯವಸಾಯ ಕ್ಷೇತ್ರ ಅವಲಂಬಿಸಿರುವವರಿಗೆ ಬಲ ತುಂಬುವ ಅಗತ್ಯವಿದೆ. ಹಾಗೆಯೇ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾಗಿದೆ ಎಂದರು.

ಇದೇ ವೇಳೆ ಅವರು ಶಿಕ್ಷಣ ಕ್ಷೇತ್ರದ ಮಹತ್ವದ ಬಗ್ಗೆ ಹೇಳಿದರು. ಶಿಕ್ಷಣದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಪೌಷ್ಟಿಕತೆ, ಪರಿಸರ, ನೈರ್ಮಲ್ಯ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಶಿಕ್ಷಣದ ಹಂತದಿಂದಲೇ ಅರಿವು ಮೂಡಿಸಬೇಕು. ಹಾಗೆಯೇ, ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಶಿಕ್ಷಣದ ಹಂತದಲ್ಲೇ ಸಜ್ಜು ಮಾಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮದ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಲೇಬೇಕು. ಈಗ ನಮ್ಮದು ಉದ್ಯಮ ಆಧಾರಿತ ಆರ್ಥಿಕತೆಯಾಗಿದೆ. ಮುಂಬರುವ ದಿನಗಳಲ್ಲಿ ಇದು ಸಾಂಸ್ಥಿಕ ಆಧಾರಿತ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ಅವರು ವಿವರಿಸಿದರು.

ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಹಾಜರಿದ್ದರು.

ಜೈವಿಕ ವಿಜ್ಞಾನಗಳ ದತ್ತಾಂಶ, ಕೃಷಿ ಜೈವಿಕ ತಾಂತ್ರಿಕತೆ, ಟೆಲಿ ಹೆಲ್ತ್, ಟೆಲಿ ಮೆಡಿಸಿನ್, ಲಸಿಕೆಗಳು, ಔಷಧ ಉತ್ಪಾದನೆ. ಬಿಗ್ ಡ್ಯಾಟಾ ಅನಲಿಟಿಕ್ಸ್, ಕೋವಿಡ್-19ಯಿಂದಾಗಿ ಸೃಷ್ಟಿಯಾಗಿರುವ `ನ್ಯೂ ನಾರ್ಮಲ್', ಭವಿಷ್ಯದಲ್ಲಿ ಹೆಬ್ರಿಡ್ ಗೋಷ್ಟಿಗಳ ಪ್ರಾಮುಖ್ಯ ಇವುಗಳ ಬಗ್ಗೆ ಆಲೋಚಿಸುವ ಅಗತ್ಯವಿದೆ'

-ಕಿರಣ್ ಮಜುಂದಾರ್ ಷಾ, ಕಾರ್ಯನಿರ್ವಾಹಕ ಅಧ್ಯಕ್ಷರು, ಬಯೋಕಾನ್ ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News