ಶಿಕ್ಷಣ ಕ್ಷೇತ್ರದ ಲಾಕ್‌ಡೌನ್ ಮುಗಿಯುವುದು ಎಂದು?

Update: 2020-11-07 07:06 GMT

ಅಕ್ಟೋಬರ್‌ನಲ್ಲಿ ತೆರೆಯಬಹುದು ಎಂದು ಭಾವಿಸಲಾಗಿದ್ದ ಶಾಲೆಯ ಬಾಗಿಲು ನವೆಂಬರ್‌ನಲ್ಲೂ ತೆರೆದಿಲ್ಲ. ದೇಶ ಲಾಕ್‌ಡೌನ್‌ನಿಂದ ನಿಧಾನಕ್ಕೆ ಹೊರ ಬರುತ್ತಿದೆ. ರಾಜ್ಯದಲ್ಲಂತೂ ಸಿನೆಮಾ ಮಂದಿರಗಳ ಬಾಗಿಲುಗಳೂ ತೆರೆದಿವೆ. ಆದರೆ ಮಕ್ಕಳ ವಿಷಯದಲ್ಲಿ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಚಿತ್ರಮಂದಿರಕ್ಕೂ ಶಾಲೆಗೂ ವ್ಯತ್ಯಾಸವಿದೆ. ಚಿತ್ರಮಂದಿರದಲ್ಲಿ ಪಾಲಿಸಬಹುದಾದ ಜಾಗರೂಕತೆಯನ್ನು ಶಾಲೆಯಲ್ಲಿ ಅನುಷ್ಠಾನಗೊಳಿಸುವುದು ಕಷ್ಟ. ಮಕ್ಕಳ ಆರೋಗ್ಯ ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ‘ಮೊದಲು ಆರೋಗ್ಯ ಬಳಿಕ ಶಿಕ್ಷಣ’ ಎನ್ನುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಗಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಶಾಲೆ ತೆರೆದ ಬಳಿಕ ಹಲವು ಮಕ್ಕಳು ಕೊರೋನ ಪೀಡಿತರಾಗಿರುವುದರಿಂದ ಸರಕಾರ ಶಾಲೆ ತೆರೆಯುವುದರ ಕುರಿತಂತೆ ಅವಸರಿಸದಿರುವುದೇ ಉತ್ತಮ. ಒಂದು ವೇಳೆ ಶಾಲೆಯಿಂದಾಗಿ ವಿದ್ಯಾರ್ಥಿಗಳ ನಡುವೆ ಸೋಂಕು ಹರಡಿದರೆ ಅನಿವಾರ್ಯವಾಗಿ ಶಾಲೆಯನ್ನೇ ಮುಚ್ಚಬೇಕಾಗುತ್ತದೆ. ಇತರ ಶಾಲೆಗಳು ತೆರೆದಿದ್ದು, ಒಂದು ಶಾಲೆ ಕೊರೋನ ಕಾರಣದಿಂದ ಮುಚ್ಚಲ್ಪಟ್ಟರೆ ಆ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಆದುದರಿಂದ ಸಂಪೂರ್ಣ ಮುಂಜಾಗ್ರತೆಯನ್ನು ವಹಿಸಿಕೊಂಡ ಬಳಿಕ ಏಕಕಾಲದಲ್ಲಿ ಶಾಲೆಗಳನ್ನು ತೆರೆಯುವುದು ಅತ್ಯುತ್ತಮ ಕ್ರಮವಾಗಿದೆ.

ಆದರೆ ಈಗಾಗಲೇ ಶಿಕ್ಷಣದ ವಿಷಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳ ಕುರಿತಂತೆ ಸರಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗಿದೆ. ಮುಖ್ಯವಾಗಿ ಆನ್‌ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ನಡುವೆ ಸೃಷ್ಟಿಯಾಗಿರುವ ವ್ಯಾಪಕ ತಾರತಮ್ಯಗಳ ಕುರಿತಂತೆ. ಸದ್ಯ ಬಹುತೇಕ ಖಾಸಗಿ ಶಾಲೆಗಳು ಅನಿವಾರ್ಯವಾಗಿ ಆನ್‌ಲೈನ್ ಶಿಕ್ಷಣಕ್ಕೆ ಮೊರೆ ಹೋಗಿವೆ. ಶಾಲೆಯ ಭವಿಷ್ಯ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಮ್ಮ ಕ್ರಮಗಳನ್ನು ಖಾಸಗಿ ಶಾಲೆಗಳು ಸಮರ್ಥಿಸಿಕೊಳ್ಳುತ್ತಿವೆ. ಆದರೆ ಸರಕಾರಿ ಶಾಲೆಗಳಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಆನ್‌ಲೈನ್ ಮೂಲಕ ಶಿಕ್ಷಣ ನೀಡುವಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿವೆ. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಅದಕ್ಕೆ ಮುಖ್ಯ ಕಾರಣವಾಗಿದೆ. ಲಾಕ್‌ಡೌನ್‌ನಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳು ಆರ್ಥಿಕವಾಗಿ ತತ್ತರಿಸಿ ಕೂತಿವೆೆ. ಆನ್‌ಲೈನ್‌ನ ಪರಿಚಯವೇ ಇಲ್ಲದ ಅದೆಷ್ಟೋ ಮನೆಗಳಿವೆ. ಮೊಬೈಲ್‌ಗಳಿದ್ದರೂ ಅದರಲ್ಲಿ ಇಂಟರ್‌ನೆಟ್ ಸೌಲಭ್ಯಗಳಿಲ್ಲದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದು ಖಾಸಗಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ. ಮೊಬೈಲ್‌ಗಳಿದ್ದರೂ ನೆಟ್‌ವರ್ಕ್ ಸರಿಯಾಗಿಲ್ಲದೆ ಅರ್ಧಂಬರ್ಧ ಪಾಠಗಳನ್ನು ಕೇಳುತ್ತಾ ದಿನಗಳನ್ನು ದೂಡುವ ಮಕ್ಕಳಿದ್ದಾರೆ. ಆರ್ಥಿಕ ತೊಂದರೆಯಿಂದಾಗಿ ಶುಲ್ಕ ಕಟ್ಟದೆ ಆನ್‌ಲೈನ್ ಶಿಕ್ಷಣದಿಂದ ವಂಚಿತರಾದವರ ಸಂಖ್ಯೆಯೂ ಅಧಿಕವಾಗಿದೆ. ‘ಆರ್ಥಿಕ ತೊಂದರೆಗಳ ಕಾರಣದಿಂದ ಮಕ್ಕಳು ಸರಕಾರಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ ’ಎಂದು ಸಚಿವರೇ ಹೇಳಿಕೆ ನೀಡಿದ್ದಾರೆ. ಇದನ್ನೊಂದು ಶುಭ ಸುದ್ದಿಯಂತೆ ಹಂಚಿಕೊಂಡಿದ್ದಾರೆ. ಎಲ್ಲರನ್ನು ಬಡವರನ್ನಾಗಿಸಿ ಸರಕಾರಿ ಶಾಲೆಗೆ ಬರುವಂತೆ ಮಾಡುವುದು ಸರಕಾರದ ಯೋಜನೆಯ ಭಾಗವಾಗಿದೆಯೇ? ಈವರೆಗೆ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಸರಕಾರಿ ಶಾಲೆಯ ಕಡೆಗೆ ಮುಖ ಮಾಡುವಾಗ, ಅಲ್ಲಿ ದೊರಕುವ ಪರಿಣಾಮಕಾರಿ ಶಿಕ್ಷಣ ಸರಕಾರಿ ಶಾಲೆಗಳಲ್ಲೂ ದೊರಕ ಬೇಡವೇ? ಈ ನಿಟ್ಟಿನಲ್ಲಿ, ಸರಕಾರಿ ಶಾಲೆಗಳನ್ನು ಎಷ್ಟರ ಮಟ್ಟಿಗೆ ಸಜ್ಜುಗೊಳಿಸಲಾಗಿದೆ ಎನ್ನುವ ಕುರಿತಂತೆ ಸರಕಾರ ಉತ್ತರಿಸುವ ಅಗತ್ಯವಿದೆ.

ಶಿಕ್ಷಣದಲ್ಲಿ ಸೃಷ್ಟಿಯಾಗಿರುವ ವ್ಯಾಪಕ ತಾರತಮ್ಯ ಮಕ್ಕಳ ಮನಸ್ಸಿನ ಮೇಲೆ ಭಾರೀ ಪರಿಣಾಮಗಳನ್ನು ಬೀರಿದೆೆ. ಆನ್‌ಲೈನ್ ಸೌಲಭ್ಯಗಳಿಲ್ಲದೆ ಶಿಕ್ಷಣ ವಂಚಿತ ಪ್ರತಿಭಾವಂತ ಮಕ್ಕಳಲ್ಲಿ ಆತಂಕ, ಖಿನ್ನತೆಗಳು ಕಾಣಿಸಿಕೊಂಡ ಹಲವು ಪ್ರಕರಣಗಳಿವೆ. ಅಷ್ಟೇ ಅಲ್ಲ, ಅವರೊಳಗೆ ಕೀಳರಿಮೆಯನ್ನ್ನೂ ಸೃಷ್ಟಿಸಿದೆ. ವಿದ್ಯಾರ್ಥಿಗಳು ಉಳ್ಳವರು, ಇಲ್ಲದವರು ಎಂದು ಗುರುತಿಸಲ್ಪಡುತ್ತಿದ್ದಾರೆ. ಪ್ರತಿಭೆ ಬದಿಗೆ ಸರಿದು ಹಣವುಳ್ಳವರಿಗೆ, ಮೊಬೈಲ್ ಉಳ್ಳವರಿಗೆ ಶಿಕ್ಷಣ ಎನ್ನುವುದು ಅನಧಿಕೃತವಾಗಿ ಘೋಷಣೆಯಾಗಿದೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಶಿಕ್ಷಣವನ್ನು ನೀಡುವುದಕ್ಕಿಂತ ಎಲ್ಲರಿಗೂ ಶಾಲೆಯ ಬಾಗಿಲನ್ನು ತೆರೆಯುವುದರಿಂದ ಅನಗತ್ಯ ಮಾನಸಿಕ ಒತ್ತಡಗಳಿಂದ ವಿದ್ಯಾರ್ಥಿಗಳು ಮುಕ್ತಿ ಪಡೆಯಬಹುದು. ಶಾಲೆಯಲ್ಲಿ ಪ್ರತಿಭಾವಂತರಾಗಿದ್ದು ಮೊಬೈಲ್ ಕಾರಣದಿಂದಾಗಿ ಶಿಕ್ಷಣ ವಂಚಿತರಾದ ವಿದ್ಯಾರ್ಥಿಗಳ ದುಃಖ, ಸಂಕಟಗಳನ್ನು ಇದಕ್ಕೆ ಹೊರತಾಗಿ ಪರಿಹರಿಸುವ ದಾರಿ ಸರಕಾರದ ಬಳಿ ಇದೆಯೇ? ಇಂತಹ ಸಂದರ್ಭದಲ್ಲಿ ಸರಕಾರದ ಬಳಿ ಎರಡು ಸ್ಪಷ್ಟ ಆಯ್ಕೆಗಳಿವೆ. ಒಂದು ಅರ್ಧಂಬರ್ಧ ಆನ್‌ಲೈನ್ ಶಿಕ್ಷಣವನ್ನು ನಿಷೇಧಿಸುವುದು ಅಥವಾ ಮುಂಜಾಗ್ರತಾ ಕ್ರಮಗಳ ಜೊತೆಗೆ ಶಾಲೆಗಳನ್ನು ಪುನರಾರಂಭಿಸುವುದು.

ಇದೇ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು ಇದಕ್ಕಿಂತ ಭಿನ್ನವಾದುದು. ಅದೆಷ್ಟೋ ಖಾಸಗಿ ಶಾಲೆಗಳು ಕಡಿಮೆ ಶುಲ್ಕಗಳ ಮೂಲಕ ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿವೆ. ಇಂತಹ ಶಾಲೆಗಳು ಲಾಕ್‌ಡೌನ್ ಬಳಿಕ ವಿದ್ಯಾರ್ಥಿಗಳ ಬಳಿ ಶುಲ್ಕವನ್ನೂ ವಸೂಲಿ ಮಾಡಲಾಗದೆ, ಅತ್ತ ಶಿಕ್ಷಕರಿಗೂ ವೇತನ ನೀಡಲಾಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿವೆ. ರಾಜ್ಯಾದ್ಯಂತ ನೂರಾರು ಶಿಕ್ಷಕರು ವೇತನ ಸಿಗದೆ ಕಂಗಾಲಾಗಿದ್ದಾರೆ. ಹಲವರನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕೆಲಸದಿಂದ ಅನಿವಾರ್ಯವಾಗಿ ವಜಾಗೊಳಿಸಿವೆ. ಶಾಲೆಗಳನ್ನೇ ಶಾಶ್ವತವಾಗಿ ಮುಚ್ಚಬೇಕಾದಂತಹ ಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ಆನ್‌ಲೈನ್ ಶಿಕ್ಷಣ ಆರಂಭವಾದ ಬಳಿಕ ಖಾಸಗಿ ಶಾಲೆಗಳು ಒಂದಿಷ್ಟು ಉಸಿರಾಡಿವೆ. ಹಲವು ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣ ಆರಂಭಿಸಿರುವುದೇ ಶಿಕ್ಷಕರಿಗೆ ವೇತನವನ್ನು ನೀಡುವುದಕ್ಕಾಗಿ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಇನ್ನೂ ತೆರೆಯದೇ ಇದ್ದಲ್ಲಿ, ಖಾಸಗಿ ಶಾಲೆಗಳು ಸಂಬಂಧಪಟ್ಟ ಸಿಬ್ಬಂದಿ ವೇತನಗಳನ್ನು ಪಾವತಿಸುವುದು ಹೇಗೆ? ಸರಕಾರ ಆರ್ಥಿಕವಾಗಿ ಇವರ ನೆರವಿಗೆ ಬರಬೇಕು ಅಥವಾ ಮುಂದಿನ ಡಿಸೆಂಬರ್‌ನಿಂದಲಾದರೂ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು. ಇಡೀ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸುವುದು ಯಾವ ರೀತಿಯಲ್ಲೂ ಸಮಂಜಸವಲ್ಲ. ಹಂತಹಂತವಾಗಿ ವಿದ್ಯಾರ್ಥಿಗಳಿಗೆ ಶಾಲೆಗಳು ತೆರೆದುಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭವಾಗಿದೆಯಾದರೂ, ಇದೀಗ ಅಲ್ಲಿನ ವಿದ್ಯಾರ್ಥಿಗಳು ಕೊರೋನ ಭೀತಿಯನ್ನು ಎದುರಿಸುತ್ತಿದ್ದಾರೆ. ಅಲ್ಲಿನ ವೈಫಲ್ಯಗಳನ್ನು ಪಾಠವಾಗಿಟ್ಟುಕೊಂಡು, ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿ. ಉಳಿದ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಲಿ. ಶಿಕ್ಷಣವೆನ್ನುವುದು ಕತ್ತಲ ನಡುವೆ ಹಚ್ಚುವ ಬೆಳಕಿನಂತೆ. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ಶಾಲೆಗಳಲ್ಲಿ ಶಿಕ್ಷಣದ ಹಣತೆ ಸಾಲು ಸಾಲಾಗಿ ಬೆಳಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News