×
Ad

'ಜ್ಞಾನತಾಣ' ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿ: ಸಿಎಂ ಯಡಿಯೂರಪ್ಪ

Update: 2020-11-09 18:33 IST

ಬೆಂಗಳೂರು, ನ. 9: `ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಆನ್‍ಲೈನ್ ಶಿಕ್ಷಣ ಉತ್ತಮ ಮಾರ್ಗ. ವಿದ್ಯಾರ್ಥಿಗಳಿಗೆ ಅಂತರ್ಜಾಲದ ಶಿಕ್ಷಣದ ಮಹತ್ವ ತಿಳಿಸಲು ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾಯೋಜಿತ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮ `ಜ್ಞಾನತಾಣ' ಸಹಕಾರಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಬಣ್ಣಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಅಂತರ್ಜಾಲ `ಜ್ಞಾನತಾಣ' ಶಿಕ್ಷಣ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆಯಿಂದ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ ಎಂದರು.

ಒಂದು ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯಿಂದ ಅನುಕೂಲವಾಗಲಿದೆ. 450 ಗೌರವ ಶಿಕ್ಷಕರ ಸೇವೆ ಪಡೆದಿರುವ ಈ ಕಾರ್ಯಕ್ರಮ ನಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ ಎಂದ ಅವರು, ನಾಡಿನಾದ್ಯಂತ ಉತ್ತಮ ಗುಣಮಟ್ಟದ ನೈತಿಕ ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಆಡಳಿತ ಶಿಕ್ಷಣ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಯೋಜನೆಗಳು ಜನರ ಬದುಕನ್ನು ಹಸನಗೊಳಿಸುತ್ತಿವೆ ಎಂದು ಹೇಳಿದರು.

ಶ್ರೀ ಕ್ಷೇತ್ರವು ಒಂದು ಧಾರ್ಮಿಕ ಸಂಸ್ಥೆಯಾದರೂ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುವುದಕ್ಕೆ ಅಪೂರ್ವವಾದ ಉದಾಹರಣೆ. ಇದು ಜಗತ್ತಿಗೆ ಮಾದರಿಯಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮ ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ನುಡಿದರು.

ಧರ್ಮಸ್ಥಳ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ನೈತಿಕತೆ, ಸರಳತೆ, ಸಾಂಸ್ಕೃತಿಕ ತಾಣವಾಗಿದೆ. ಧರ್ಮಸ್ಥಳ ಕೇವಲ ಸ್ಥಳದ ಹೆಸರಲ್ಲ, ಅದು ಪರಂಪರಾಗತ ದೈವಿಕ ಸಂಕೇತ ಮತ್ತು ವಿಶ್ವಾಸದ ಪ್ರತೀಕ. ಸರ್ವಧರ್ಮ ಸಮನ್ವಯ ಮತ್ತು ಮಾನವ ಜಾತಿ ತಾನೊಂದೇ ವಲಂ ಎನ್ನುವ ಸಂಪ್ರದಾಯವನ್ನು ಶ್ರೀಕ್ಷೇತ್ರದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಕ್ಷೇತ್ರವಾಗಿದೆ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದೆ ಎಂದರು.

ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಕಾರ್ಯಕ್ರಮಗಳು, ಕೃಷಿ ತರಬೇತಿ, ಮಹಿಳಾ ವಿಕಾಸ ಕಾರ್ಯಕ್ರಮಗಳು ಸೇರಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಾಡಿನ ಸಮಗ್ರವಾದ ಬೆಳವಣಿಗೆಗಳಿಗೆ ಸರಕಾರದೊಂದಿಗೆ ಯಶಸ್ವಿಯಾಗಿ ಕೈಜೋಡಿಸಿದ ಹೆಗ್ಗಳಿಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರದ್ದಾಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳದಿಂದ ಆನ್‍ಲೈನ್ ಮೂಲಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆ ವಿವರ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ.ಸುರೇಂದ್ರಕುಮಾರ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ನಿರ್ದೇಶಕ ಶ್ರೇಯಸ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News