ಶ್ರಮಿಕ ವರ್ಗಕ್ಕೆ ಪೂರಕವಾದ ಆರ್ಥಿಕತೆ ನಿರ್ಮಾಣ: ಕಮಲಾ ಹ್ಯಾರಿಸ್ ಘೋಷಣೆ

Update: 2020-11-10 17:16 GMT

 ವಾಶಿಂಗ್ಟನ್, ನ. 10: ಅಮೆರಿಕದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಲು ನಾನು ಮತ್ತು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸಿದ್ಧರಾಗಿದ್ದೇವೆ ಹಾಗೂ ಶ್ರಮಿಕ ಕುಟುಂಬಗಳಿಗೆ ನೆರವು ನೀಡುವ ಆರ್ಥಿಕತೆಯ ನಿರ್ಮಾಣವನ್ನು ನಾವು ಅಧಿಕಾರಕ್ಕೇರಿದ ಮೊದಲ ದಿನವೇ ಪ್ರಾರಂಭಿಸುತ್ತೇವೆ ಎಂದು ದೇಶದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

 ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುವುದು, ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು ನೂತನ ಆಡಳಿತದ ನಾಲ್ಕು ಪ್ರಮುಖ ಆದ್ಯತೆಗಳಾಗಿವೆ ಎಂದು ಬೈಡನ್ ಪ್ರಚಾರ ತಂಡ ರವಿವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘‘ನಮ್ಮ ದೇಶದ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ನಿರ್ಮಿಸಲು ಬೈಡನ್ ಮತ್ತು ನಾನು ಸಿದ್ಧರಾಗಿದ್ದೇವೆ’’ ಎಂಬುದಾಗಿ ಕಮಲಾ ಸೋಮವಾರ ಟ್ವೀಟ್ ಮಾಡಿದ್ದಾರೆ.

‘‘ಅಧಿಕಾರಕ್ಕೆ ಬರುವ ಮೊದಲ ದಿನವೇ ಶ್ರಮಿಕ ವರ್ಗಕ್ಕೆ ಪೂರಕವಾದ ಆರ್ಥಿಕತೆಯೊಂದನ್ನು ನಿರ್ಮಿಸಲು ಪ್ರಾರಂಭಿಸುತ್ತೇವೆ’’ ಎಂದು ನೂತನ ಸರಕಾರದ ಆದ್ಯತೆಗಳನ್ನು ವಿವರಿಸುತ್ತಾ ಅವರು ಹೇಳಿದ್ದಾರೆ.

56 ವರ್ಷದ ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ಸೃಷ್ಟಿಸಿದ್ದಾರೆ. ಅವರು ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿದ್ದಾರೆ. ಹಾಗಾಗಿ, ಸಹಜವಾಗಿಯೇ ಮೊದಲ ಬಿಳಿಯೇತರ ಮತ್ತು ಏಶ್ಯ ಮೂಲದ ಉಪಾಧ್ಯಕ್ಷರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News