ಬ್ರಿಟನ್ : ಕೊರೋನ ಸೋಂಕಿಗೆ 50 ಸಾವಿರಕ್ಕೂಅಧಿಕ ಬಲಿ

Update: 2020-11-12 03:43 GMT

ಲಂಡನ್: ಬ್ರಿಟನ್‌ನಲ್ಲಿ ಇದುವರೆಗೆ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ಬುಧವಾರ 50 ಸಾವಿರದ ಗಡಿ ದಾಟಿದೆ. ಈ ಮೂಲಕ ಯೂರೋಪ್‌ನಲ್ಲೇ ಗರಿಷ್ಠ ಕೋವಿಡ್ ಸಾವು ಸಂಭವಿಸಿದ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.

ಈಗಾಗಲೇ ಪ್ರಯೋಗ ಹಂತದಲ್ಲಿರುವ ಪಿಫಿಝೆರ್ ಲಸಿಕೆ ಎಲ್ಲ ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಡಿಸೆಂಬರ್‌ನಿಂದ ಸಾಮೂಹಿಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ 595 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 50,365ಕ್ಕೇರಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ ಸಾವಿಗೆ ಕೊರೋನಾ ವೈರಸ್ ಸೋಂಕು ಕಾರಣ ಎಂಬ ಪ್ರಮಾಣಪತ್ರಗಳನ್ನು ಲೆಕ್ಕಹಾಕಿದರೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 60 ಸಾವಿರಕ್ಕಿಂತಲೂ ಅಧಿಕ.

"ಈ ವಾರ ಪಿಫಿಝೆರ್ ಲಸಿಕೆ ಸುದ್ದಿಮಾಡಿದ ಹೊರತಾಗಿಯೂ ದೇಶ ಇತರೆಡೆಗಳಿಗಿಂತ ಭಿನ್ನವಲ್ಲ ಎನ್ನುವುದನ್ನು ಈ ಮೈಲುಗಲ್ಲು ಸೂಚಿಸುತ್ತದೆ. ಪ್ರತಿ ಸಾವು ಕೂಡಾ ದುರಂತ. ಆದರೆ ನಾವು ಕೋವಿಡ್ ಚಿಕಿತ್ಸೆಯಲ್ಲಿ ಭಿನ್ನ ವಿಧಾನವನ್ನು ಅನುಸರಿಸುವ ಹಂತಕ್ಕೆ ಬಂದಿದ್ದೇವೆ" ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಅಮೆರಿಕ, ಬ್ರೆಝಿಲ್, ಭಾರತ ಮತ್ತು ಮೆಕ್ಸಿಕೋ ಬಳಿಕ 50 ಸಾವಿರಕ್ಕೂ ಹೆಚ್ಚು ಕೋವಿಡ್ ಸಾವು ಸಂಭವಿಸಿದ ಐದನೇ ದೇಶವಾಗಿ ಬ್ರಿಟನ್ ಸೇರ್ಪಡೆಯಾಗಿದೆ. ದೇಶದಲ್ಲಿ ಒಟ್ಟು 12,56,725 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 22,950 ಪ್ರಕರಣಗಳು ಬೆಳಕಿಗೆ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News