ಬಿಹಾರ : ಮಹಾಮೈತ್ರಿಕೂಟಕ್ಕೆ ಕೂದಲೆಳೆ ಅಂತರದಲ್ಲಿ ತಪ್ಪಿದ ಜಯ

Update: 2020-11-12 04:00 GMT

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟ (ಎಂಜಿಬಿ)ಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಜಯ ಕೈತಪ್ಪಿರುವುದು ಶೇಕಡಾವಾರು ಮತಗಳ ವಿಶ್ಲೇಷಣೆಯಿಂದ ಸ್ಪಷ್ಟವಾಗುತ್ತದೆ.

ಫಲಿತಾಂಶ ಪ್ರಕಟವಾಗುವ ಹಿಂದಿನ ದಿನ 31ನೇ ವರ್ಷಕ್ಕೆ ಕಾಲಿಟ್ಟಿದ್ದ ತೇಜಸ್ವಿಗೆ ಮುಖ್ಯಮಂತ್ರಿ ಪದವಿ ಕೂದಲೆಳೆ ಅಂತರದಲ್ಲಿ ಕೈತಪ್ಪಿದೆ. ಎನ್‌ಡಿಎ ಹಾಗೂ ಎಂಜಿಬಿ ನಡುವಿನ ಶೇಕಡಾವಾರು ಮತಗಳ ಅಂತರ 0.03ರಷ್ಟು ಮಾತ್ರ. ಇದು ದೇಶದ ಯಾವುದೇ ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯಂತ ಕನಿಷ್ಠ ಅಂತರವಾಗಿದೆ. ರಾಜ್ಯದಲ್ಲಿ ಚಲಾವಣೆಯಾದ 3.14 ಕೋಟಿ ಮತಗಳ ಪೈಕಿ ಎರಡು ಕೂಟಗಳ ನಡುವಿನ ಅಂತರ ಕೇವಲ 12,768 ಮಾತ್ರ. ಎನ್‌ಡಿಎ 1,57,01,226 ಮತಗಳನ್ನು ಪಡೆದರೆ, ಮಹಾಮೈತ್ರಿಕೂಟ 1,56,88,458 ಮತಗಳನ್ನು ಗಳಿಸಿದೆ.

ಒಟ್ಟು ಮತಗಳ ಪೈಕಿ ಎನ್‌ಡಿಎ ಪಾಲು 37.26% ಆಗಿದ್ದರೆ, ಎಂಜಿಪಿ ಶೇಕಡ 37.23ರಷ್ಟು ಮತ ಗಳಿಸಿದೆ. ಉಭಯ ಮೈತ್ರಿಕೂಟಗಳ ನಡುವಿನ ಮತಗಳ ಅಂತರ ಸರಾಸರಿ ಗೆಲುವಿನ ಅಂತರವಾದ 16,825ಕ್ಕಿಂತಲೂ ಕಡಿಮೆ. 243 ಕ್ಷೇತ್ರಗಳ ಪೈಕಿ 130 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 12,768ಕ್ಕಿಂತ ಕಡಿಮೆ ಇದೆ.

ಎಂಜಿಬಿ ಪರವಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ತಲಾ 53 ಮತಗಳು ಅಧಿಕವಾಗಿ ಚಲಾವಣೆಯಾಗಿದ್ದರೂ, ಅಥವಾ ಎನ್‌ಡಿಎ ಪ್ರತಿ ಕ್ಷೇತ್ರಗಳಲ್ಲಿ ಅಷ್ಟು ಮತ ಕಡಿಮೆ ಪಡೆದಿದ್ದರೆ, ಎಂಜಿಪಿ ಮತಗಳಿಕೆ ಅಧಿಕ ಇರುತ್ತಿತ್ತು. ಐದು ವರ್ಷಗಳ ಹಿಂದೆ ಏಕಪಕ್ಷೀಯ ಹೋರಾಟ ಎನಿಸಿದ್ದ ರಾಜ್ಯದಲ್ಲಿ ಈ ಬಾರಿ ಫೋಟೊ ಫಿನಿಶ್ ಫಲಿತಾಂಶ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಆರ್ ಜೆ ಡಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಎಂಜಿಪಿ 1,59,52,188 ಮತಗಳನ್ನು ಗಳಿಸಿದ್ದರೆ, ಬಿಜೆಪಿ, ಎಲ್‌ಜೆಪಿ, ಎಚ್‌ಎಎಂ(ಎಸ್) ಮತ್ತು ಆರ್‌ಎಲ್‌ಎಸ್‌ಪಿ ಪಕ್ಷಗಳನ್ನೊಳಗೊಂಡ ಎನ್‌ಡಿಎ 1,29,90,645 ಮತಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಎರಡು ಕೂಟಗಳ ಮಧ್ಯೆ 29.6 ಲಕ್ಷ ಮತಗಳ ಅಂತರ ಇತ್ತು ಹಾಗೂ ಇದು ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡ 7.8ರಷ್ಟು. ಅತಿಹೆಚ್ಚು ಸ್ಥಾನ ಗಳಿಸಿದ ಪಕ್ಷವಾದ ಆರ್‌ಜೆಡಿ 75 ಸ್ಥಾನ ಗೆದ್ದಿದ್ದು, 23.1% ಸಾಧನೆಯೊಂದಿಗೆ ಮತಗಳಿಕೆಯಲ್ಲೂ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News