ಖಾಸಗಿ ಆಸ್ಪತ್ರೆಯ ವೈದ್ಯರಿಂದ ವರವರ ರಾವ್ ವೈದ್ಯಕೀಯ ತಪಾಸಣೆಗೆ ಹೈಕೋರ್ಟ್ ಆದೇಶ

Update: 2020-11-12 15:45 GMT

ಮುಂಬೈ, ನ. 12: ಕಾರಾಗೃಹದಲ್ಲಿರುವ ಕವಿ-ಸಾಮಾಜಿಕ ಹೋರಾಟಗಾರ ವರ ವರ ರಾವ್ ಅವರ ವೈದ್ಯಕೀಯ ತಪಾಸಣೆಯನ್ನು ವೀಡಿಯೊ ಲಿಂಕ್ ಮೂಲಕ ನಡೆಸುವಂತೆ ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರ ಸಮಿತಿಗೆ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ನಿರ್ದೇಶಿಸಿದೆ.

ಎಲ್ಗಾರ್ ಪರಿಷತ್-ಮಾವೋವಾದಿಗಳೊಂದಿಗೆ ನಂಟು ಹೊಂದಿದ ಪ್ರಕರಣದಲ್ಲಿ 81 ವರ್ಷದ ವರ ವರ ರಾವ್ ಅವರು ನವಿ ಮುಂಬೈಯ ಸಮೀಪದ ತಲೋಜಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ರಾವ್ ಅವರನ್ನು ಉತ್ತಮ ಚಿಕಿತ್ಸೆಗೆ ಖಾಸಗಿ ನಾನಾವತಿ ಆಸ್ಪತ್ರೆಗೆ ವರ್ಗಾಯಿಸುವಂತೆ, ಅವರ ಆರೋಗ್ಯ ಪರಿಶೀಲಿಸಲು ಸ್ವತಂತ್ರ ವೈದ್ಯಕೀಯ ಮಂಡಳಿ ರೂಪಿಸುವಂತೆ, ಜಾಮೀನಿನಲ್ಲಿ ಕಾರಾಗೃಹದಿಂದ ಬಿಡುಗಡೆ ಮಾಡುವಂತೆ ಕೋರಿ ರಾವ್ ಅವರ ಪತ್ನಿ ಹೇಮಲತಾ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಕೆ. ಮೆನನ್ ನೇತೃತ್ವದ ವಿಭಾಗೀಯ ನ್ಯಾಯಪೀಠ ನಡೆಸಿತು.

ರಾವ್ ಅವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ. ಈ ನ್ಯಾಯಬದ್ಧ ಬಂಧನದಿಂದ ಅವರು ಕಾರಾಗೃಹದಲ್ಲೇ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ರಾವ್ ಅವರ ವಕೀಲ ಇಂದಿರಾ ಜೈಸಿಂಗ್ ಪ್ರತಿಪಾದಿಸಿದ್ದಾರೆ. ರಾವ್ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಸ್ಟ್‌ನಿಂದ ಅವರು ಕಾರಾಗೃಹ ಆಸ್ಪತ್ರೆಯ ಹಾಸಿಗೆಯಲ್ಲೇ ಇದ್ದಾರೆ. ಅವರು ಡಯಾಪರ್ ಧರಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. ರಾವ್ ಅವರು ಕಾರಾಗೃಹದಲ್ಲಿ ಮೃತಪಟ್ಟರೆ, ಅದು ಕಸ್ಟಡಿ ಸಾವಿನ ಪ್ರಕರಣವಾಗಬಹುದು. ಅವರ ಬಂಧನ ಕಲಂ 21ರ ಅಡಿಯಲ್ಲಿ ಅವರ ಬದುಕುವ ಹಕ್ಕಿನ ಉಲ್ಲಂಘನೆ ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News