ಕೋವಿಡ್-19: ಶಾಲೆಗಳ ಪುನರಾರಂಭ ನಿರ್ಧಾರವನ್ನು ಹಿಂದೆಗೆದುಕೊಂಡ ತಮಿಳುನಾಡು ಸರಕಾರ

Update: 2020-11-12 16:46 GMT
ಸಾಂದರ್ಭಿಕ ಚಿತ್ರ

ಚೆನ್ನೈ,ನ.12: ತಮಿಳುನಾಡು ಸರಕಾರವು 9ರಿಂದ 12ನೇ ತರಗತಿಯವರೆಗಿನ ಮಕ್ಕಳಿಗಾಗಿ ನ.16ರಿಂದ ಶಾಲೆಗಳನ್ನು ಪುನರಾರಂಭಿಸುವ ತನ್ನ ನಿರ್ಧಾರವನ್ನು ಗುರುವಾರ ಹಿಂದೆಗೆದುಕೊಂಡಿದೆ. ಕೊರೋನ ವೈರಸ್ ಸ್ಥಿತಿಯನ್ನು ಆಧರಿಸಿ ಶಾಲೆಗಳ ಪುನರಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ.

ಕಾಲೇಜುಗಳು ಮತ್ತು ವಿವಿಗಳನ್ನೂ ನ.16ರಿಂದ ಪುನರಾರಂಭಿಸಬೇಕೆಂದು ನಿರ್ಧರಿಸಲಾಗಿತ್ತಾದರೂ ಅವು ಈಗ ಡಿ.2ರಿಂದ ಸಂಶೋಧನಾ ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗಗಳ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ತೆರೆಯಲಿವೆ. ಇತರ  ಎಲ್ಲ ಕೋರ್ಸ್‌ಗಳಿಗಾಗಿ ಕಾಲೇಜುಗಳ ಪುನರಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ.

ಮುಂದಿನ ತಿಂಗಳಿನಿಂದ ವ್ಯಾಸಂಗವನ್ನು ಪುನರಾರಂಭಿಸಲಿರುವ ವಿದ್ಯಾರ್ಥಿಗಳಿಗಾಗಿ ಮಾತ್ರ ಹಾಸ್ಟೆಲ್‌ಗಳನ್ನು ತೆರೆಯಲಾಗುವುದು ಎಂದೂ ಅದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

 ಶಾಲೆಗಳ ಪುನರಾರಂಭಕ್ಕೆ ಪೋಷಕರ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದು,ಈ ಕಾರಣದಿಂದ ನ.16ರಿಂದ ಪುನರಾರಂಭಿಸುವ ತನ್ನ ಅ.1ರ ನಿರ್ಧಾರವನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಸರಕಾರವು ಸೋಮವಾರ ಸರಕಾರಿ,ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪೋಷಕರೊಂದಿಗೆ ರಾಜ್ಯವ್ಯಾಪಿ ಸಮಾಲೋಚನೆಗಳನ್ನು ನಡೆಸಿತ್ತು.

ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ‘ಅವಸರದ ಪ್ರಕಟಣೆ ’ಗಾಗಿ ಸರಕಾರದ ವಿರುದ್ಧ ದಾಳಿ ನಡೆಸಿದ್ದ ಡಿಎಂಕೆ ವರಿಷ್ಠ ಎಂ.ಕೆ ಸ್ಟಾಲಿನ್ ಅವರು,2021 ಜನವರಿಯಲ್ಲಿ ರಾಜ್ಯದಲ್ಲಿ ಕೋವಿಡ್-19 ಸ್ಥಿತಿಯನ್ನು ಪರಾಮರ್ಶಿಸಿದ ಬಳಿಕವೇ ಶಾಲೆಗಳ ಪುನರಾರಂಭದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ತಮಿಳುನಾಡಿನಲ್ಲಿ ಈವರೆಗೆ 7,50,409 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಒಟ್ಟು 11,415 ಜನರು ಮೃತಪಟ್ಟಿದ್ದಾರೆ. 7,20,339 ರೋಗಿಗಳು ಚೇತರಿಸಿಕೊಂಡಿದ್ದು, ಸದ್ಯ 18,655 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News