ಚಿಲ್ಲರೆ ಹಣದುಬ್ಬರ ಆರೂವರೆ ವರ್ಷಗಳಲ್ಲೇ ಗರಿಷ್ಠ : ಅಂಕಿ ಅಂಶ

Update: 2020-11-13 03:42 GMT

ಹೊಸದಿಲ್ಲಿ: ತರಕಾರಿ ಮತ್ತು ಮೊಟ್ಟೆ ಬೆಲೆ ದುಬಾರಿಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಆರೂವರೆ ವರ್ಷಗಳಲ್ಲೇ ಗರಿಷ್ಠ ಅಂದರೆ ಶೇಕಡ 7.61ಕ್ಕೆ ತಲುಪಿದೆ.

2020ರ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ 7.27% ಆಗಿತ್ತು ಎನ್ನುವುದು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಗ್ರಾಹಕ ಬೆಲೆ ಸೂಚ್ಯಂಕ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಸತತ ಎರಡನೇ ತಿಂಗಳು ಚಿಲ್ಲರೆ ಹಣದುಬ್ಬರ ಶೇಕಡ 7ಕ್ಕಿಂತ ಅಧಿಕ ಇದೆ. 2014ರ ಮೇ ತಿಂಗಳಲ್ಲಿ ಈ ಹಿಂದಿನ ಅತ್ಯಧಿಕ ಚಿಲ್ಲರೆ ಹಣದುಬ್ಬರ ದರ ಶೇಕಡ 8.33 ದಾಖಲಾಗಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕ ಸೆಪ್ಟೆಂಬರ್‌ನಲ್ಲಿ 10.68 ಶೇಕಡ ಇದ್ದುದು ಅಕ್ಟೋಬರ್‌ನಲ್ಲಿ 11.07 ಶೇಕಡಕ್ಕೆ ಹೆಚ್ಚಿದೆ.

2019ರ ಅಕ್ಟೋಬರ್‌ನಲ್ಲಿ ಇದು 4.62% ಆಗಿತ್ತು. ತರಕಾರಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 22.51ರಷ್ಟು ಹೆಚ್ಚಿದೆ. ಪ್ರೊಟೀನ್‌ಯುಕ್ತ ಮಾಂಸ ಮತ್ತು ಮೀನಿನ ಬೆಲೆ 18.70% ಹೆಚ್ಚಿದ್ದರೆ, ಮೊಟ್ಟೆ ಬೆಲೆ 21.81% ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News