"ಸಾರ್ವಜನಿಕ ಸ್ಥಳಗಳಲ್ಲಿ ಛಾತ್ ಪೂಜೆಗೆ ವಿಧಿಸಿದ ನಿಷೇಧ ಹಿಂಪಡೆಯಿರಿ"

Update: 2020-11-13 16:45 GMT

ಹೊಸದಿಲ್ಲಿ, ನ. 13: ಜನರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಹಾಗೂ ನದಿ ದಂಡೆ, ಸಾರ್ವಜನಿಕ ಸ್ಥಳಗಳಲ್ಲಿ ಛಾತ್ ಪೂಜೆ ನಡೆಸುವುದರ ಮೇಲೆ ಹೇರಿರುವ ನಿಷೇಧ ಹಿಂಪಡೆಯಿರಿ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಶುಕ್ರವಾರ ಅರವಿಂದ್ ಕೇಜ್ರಿವಾಲ್ ಸರಕಾರವನ್ನು ವಿನಂತಿಸಿದ್ದಾರೆ.

ಕೋರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದಿಲ್ಲಿಯ ಸಾರ್ವಜನಿಕ ಸ್ಥಳ, ನದಿ ದಂಡೆ ಹಾಗೂ ದೇವಾಲಯಗಳಲ್ಲಿ ಛಾತ್ ಪೂಜೆ ನಡೆಸದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ದಿಲ್ಲಿ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಸೂಚನೆ ನೀಡಿದ ಬಳಿಕ ಗುಪ್ತಾ ಈ ಮನವಿ ಮಾಡಿದ್ದಾರೆ. ಛಾತ್ ಪೂಜೆಗೆ ಸಿದ್ಧತೆ ಮಾಡಿಕೊಳ್ಳದೇ ಇರುವುದನ್ನು ಮುಚ್ಚಿ ಹಾಕಲು ದಿಲ್ಲಿ ಸರಕಾರ ಈ ನಿಷೇಧ ವಿಧಿಸಿದೆ ಎಂದು ಅವರು ಆರೋಪಿಸಿದ್ದಾರೆ.

‘‘ಜನರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಛಾತ್ ಪೂಜೆಗೆ ವಿಧಿಸಿದ ನಿಷೇಧವನ್ನು ದಿಲ್ಲಿ ಸರಕಾರ ಕೂಡಲೇ ಹಿಂದೆ ತೆಗೆಯಬೇಕು ಹಾಗೂ ಈ ಬಗ್ಗೆ ಆದೇಶ ನೀಡಬೇಕು’’ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಛಾತ್ ಪೂಜೆ ನಡೆಸಲು ದಿಲ್ಲಿ ಸರಕಾರ 1,068 ಸಾರ್ವಜನಿಕ ಸ್ಥಳಗಳನ್ನು ನೋಂದಣಿ ಮಾಡಿಕೊಂಡಿದೆ. ಆದರೆ, ಹಬ್ಬಕ್ಕಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಇದ್ದಕ್ಕಿದ್ಧಂತೆ ಛಾತ್ ಪೂಜೆ ಮೇಲೆ ನಿಷೇಧ ವಿಧಿಸಿದೆ ಎಂದು ಅವರು ಆರೋಪಿಸಿದ್ದಾರೆ. ‘‘ಜನರು ನದಿ ದಂಡೆ, ಕೊಳ, ನೀರಿರುವ ತಾಣಗಳಲ್ಲಿ ಸೂರ್ಯ ದೇವರನ್ನು ಆರಾಧಿಸುವ ಛಾತ್ ಉತ್ಸವವನ್ನು ನಡೆಸುತ್ತಾರೆ. ಸಣ್ಣ ಮನೆಗಳಲ್ಲಿ ವಾಸಿಸುವ ಜನರು ಈ ಹಬ್ಬವನ್ನು ಆಚರಿಸುವುದು ಹೇಗೆ ?’’ ಎಂದು ಗುಪ್ತಾ ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News