ಹಸಿರು ಪಟಾಕಿಗಳೂ ಸುರಕ್ಷಿತವಲ್ಲ: ರಾಮಯ್ಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮಂಜುನಾಥ್

Update: 2020-11-14 14:20 GMT

ಬೆಂಗಳೂರು, ನ.14: ಹಸಿರು ಪಟಾಕಿಯಲ್ಲಿಯೂ ರಾಸಾಯನಿಕ ತುಂಬಿರುವುದರಿಂದ, ಅದೂ ಸುರಕ್ಷಿತವಲ್ಲ. ಚಳಿಗಾಲದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳ ಜತೆಗೆ ಪಟಾಕಿ ಹೊಗೆ ಹಾಗೂ ರಾಸಾಯನಿಕಗಳಿಂದ ಮಾಲಿನ್ಯ ಅಧಿಕವಾಗುವ ಸಾಧ್ಯತೆಯಿದೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ.

ಸರಕಾರ ಪಟಾಕಿ ಬ್ಯಾನ್ ಮಾಡಿ ಆದೇಶಿಸಿದ್ದು, ಇದೇ ಸಂದರ್ಭದಲ್ಲಿ ಹಸಿರು ಪಟಾಕಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಪಟಾಕಿಯೂ ಅತ್ಯಂತ ಅಪಾಯಕಾರಿಯಾಗಿದ್ದು, ಹಸಿರು ಪಟಾಕಿಯಲ್ಲಿ ಸಾಮಾನ್ಯ ಪಟಾಕಿಗಳಿಗಿಂತ ಶೇ. 30ರಷ್ಟು ಹೊಗೆ ಹಾಗೂ ಶಬ್ದ ಕಡಿಮೆ ಇರುತ್ತದೆ. ಆದರೆ, ಈ ಹಬ್ಬ ಚಳಿಗಾಲದ ಸಮಯದಲ್ಲಿ ಬಂದಿರುವುದರಿಂದ ವಾಯು ಮಾಲಿನ್ಯವಾಗಿ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಬರುವುದರ ಜೊತೆಗೆ ಕೋವಿಡ್ ಪ್ರಕರಣಗಳೂ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

ಪಟಾಕಿಗಳಲ್ಲಿ ರಾಸಾಯನಿಕಗಳು, ಸೂಕ್ಷ್ಮ ಕಣಗಳಿದ್ದು ಅವು ಶ್ವಾಸಕೋಶದಲ್ಲಿ ಸೇರಿ ಕಾಯಿಲೆಗಳು ಹೆಚ್ಚಾಗುತ್ತವೆ. ಚಳಿಗಾಲ, ಪಟಾಕಿ, ಕೊರೋನ ಎಲ್ಲಾ ಒಟ್ಟಿಗೆ ಸೇರಿ ಪರಿಸ್ಥಿತಿ ಬಿಗಡಾಯಿಸುವ ಎಲ್ಲಾ ಲಕ್ಷಣಗಳಿದ್ದು, ಪಟಾಕಿ ಸಿಡಿಸುವುದರಿಂದ ಸಿಗುವ ಆನಂದಕ್ಕಿಂತ ತೊಂದರೆ ಹೆಚ್ಚಾಗಲಿದೆ. ಹೀಗಾಗಿ ಪಟಾಕಿ ಹೊಡೆಯುವುದನ್ನು ಬಿಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಶ್ವಾಸಕೋಶ ತಜ್ಞ ವೈದ್ಯೆ ಡಾ. ತನೀಷ್ ಪ್ರತಿಕ್ರಿಯಿಸಿ, ಇತರೆ ಪಟಾಕಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಹಾನಿಕಾರಕ ರಾಸಾಯನಿಕಗಳಿವೆ. ಗರ್ಭಿಣಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ, ಶ್ವಾಸಕೋಶ ಕಾಯಿಲೆ ಇರುವವರಿಗೆ ಇದರಿಂದ ಕಡಿಮೆ ಪ್ರಭಾವ ಬೀರಬಹುದು. ಹಸಿರು ಪಟಾಕಿಗಳಲ್ಲಿ ಮೂರು ವಿಧವಿದ್ದು, ಯಾವುದೇ ರೀತಿಯ ಹಸಿರು ಪಟಾಕಿಗಳು ಶೇ. 15ರಿಂದ 30ರಷ್ಟು ಕಡಿಮೆ ವಾಯು ಮಾಲಿನ್ಯ ಉಂಟು ಮಾಡುತ್ತವೆ. ಜನರು ಪಟಾಕಿಗಳ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ರೀತಿಯ ವಿವರಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News