×
Ad

ಚಿನ್ನದಂಗಡಿ ಮೇಲೆ ದಾಳಿ ಮಾಡಿದ್ದ ಆರೋಪ: ಮೂವರು ನಕಲಿ ಪೊಲೀಸರ ಬಂಧನ

Update: 2020-11-15 18:51 IST

ಬೆಂಗಳೂರು, ನ. 15: ಪೊಲೀಸರ ಸೋಗಿನಲ್ಲಿ ಚಿನ್ನದ ಅಂಗಡಿ ಮೇಲೆ ದಾಳಿ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಮೂವರು ನಕಲಿ ಪೊಲೀಸರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರ್ತಪೇಟೆಯಲ್ಲಿರುವ ಚಿನ್ನಾಭರಣ ಪಾಲಿಶ್ ಮಾಡುವ ಜ್ಯುವೆಲ್ಲರಿ ಶಾಪ್‍ಗೆ ನ.11ರ ಮಧ್ಯರಾತ್ರಿ ಆರೋಪಿಗಳು ಪೊಲೀಸ್ ವೇಷದಲ್ಲಿ ಜೀಪ್‍ನಲ್ಲಿ ತೆರಳಿದ್ದು, ದೀಪಾವಳಿ ಹಬ್ಬಕ್ಕೆ ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿರುವುದರಿಂದ ದಾಳಿ ಮಾಡುತ್ತಿರುವುದಾಗಿ ಹೇಳಿದ್ದರು.

ತದನಂತರ, ಕೋಲ್ಕತ್ತಾದಲ್ಲಿದ್ದ ಮಾಲಕ ಕಾರ್ತಿಕ್‍ಗೆ ಕರೆ ಮಾಡಿ ನಿಮ್ಮ ಅಂಗಡಿ ಮೇಲೆ ದಾಳಿ ಮಾಡಿದ್ದೇವೆ. ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆ ಮಾಡಿ ಅಂಗಡಿಯಲ್ಲಿದ್ದ 200ರಿಂದ 300 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ನಂತರ ಪೊಲೀಸರು ಕರೆದಿದ್ದಾರೆ ಎಂದು ನೇರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಜ್ಯುವೆಲ್ಲರಿ ಮಾಲಕ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕಳ್ಳತನ ಮಾಡಿರುವುದು ನಕಲಿ ಪೊಲೀಸರು ಎಂಬುದು ಬೆಳಕಿಗೆ ಬಂದಿದೆ.

ಈ ಸಂಬಂಧ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಲಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಬಂದು ಹೋಗಿದ್ದ ಕಾರು ಸಂಖ್ಯೆಯ ಸುಳಿವಿನ ಮೇರೆಗೆ ನಾಗಮಂಗಲ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News