ಭವಿಷ್ಯದಲ್ಲಿ ಕೈಕುಲುಕುವುದು ಗತ ಇತಿಹಾಸವಾಗುತ್ತದೆಯೇ?

Update: 2020-11-18 19:30 GMT

ಕೈಕುಲುಕಬೇಕೇ ಬೇಡವೇ? ಕೋವಿಡ್-19 ಸಾಂಕ್ರಾಮಿಕ ಕೊನೆಗೊಳ್ಳುವವರೆಗೆ ಇದು ನಮ್ಮನ್ನು ಕಾಡುವ ಪ್ರಶ್ನೆ.

ಕೊರೋನ ಸೋಂಕಿನ ಭಯ ಹರಡುತ್ತಿದ್ದಂತೆಯೇ ಲಾಕ್‌ಡೌನ್‌ಗಳು, ಸುರಕ್ಷಿತ ಅಂತರಗಳು ಮಾಮೂಲಿಯಾದವು. ಒಮ್ಮಿಂದೊಮ್ಮೆಗೇ, ದೈಹಿಕ ಸ್ಪರ್ಶ ಬಹಿಷ್ಕಾರಕ್ಕೊಳಗಾಯಿತು. ಪರಿಣಾಮವಾಗಿ ಲಾಗಾಯ್ತಿನಿಂದ ಬಂದ ಕೈಕುಲುಕುವ ಅಭ್ಯಾಸಕ್ಕೆ ಹೊಡೆತ ಬಿತ್ತು. ಇದರಿಂದಾಗಿ ನಾವು ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾಗುವ, ಗ್ರೀಟ್ ಮಾಡುವ ಕ್ರಮವೇ ಬದಲಾಯಿತು. ಪರಸ್ಪರ ವಂದಿಸುವ, ನಮಸ್ಕರಿಸುವ, ಗ್ರೀಟ್ ಮಾಡುವ ಪದ್ಧತಿಗಳು ವಿಶ್ವಾದ್ಯಂತ ಭಿನ್ನ ಭಿನ್ನವಾಗಿವೆ. ಆದರೆ ಅತ್ಯಂತ ಸಾಮಾನ್ಯ ಹಾಗೂ ವ್ಯಾಪಕವಾದ ಕೈಕುಲುಕುವ ಪದ್ಧತಿಯ ಇತಿಹಾಸ ಕುತೂಹಲಕಾರಿಯಾಗಿದೆ. ಗ್ರೀಸ್‌ನಲ್ಲಿರುವ ಕ್ರಿಸ್ತಪೂರ್ವ ಐದನೇ ಶತಮಾನದ ಪ್ರಾಚೀನ ಶಿಲ್ಪಗಳಲ್ಲಿ ಗ್ರೀಕರು ‘ಡೆಕ್ಸಿಯೋಸಿಸ್’ ಎಂದು ಕರೆಯುತ್ತಿದ್ದ ಈ ಪದ್ಧತಿ ಚಿತ್ರಿತವಾಗಿದೆ. ಡೆಕ್ಸಿಯೋಸಿಸ್ ಎಂದರೆ ಸುಮಾರಾಗಿ ‘‘ಬಲ ಕೈ ಹಿಡಿದುಕೋ’’ ಎಂದು ಅರ್ಥವಾಗುತ್ತದೆ. ಕ್ರಿಸ್ತಪೂರ್ವ ಒಂಭತ್ತನೆಯ ಶತಮಾನದಲ್ಲಿ ಅಸ್ಸೀರಿಯದ ದೊರೆ ಮೂರನೆಯ ಶಲ್ಮನೆಸೆರ್ ಬ್ಯಾಬಿಲೋನಿಯದ ರಾಜನೊಂದಿಗೆ ಮೈತ್ರಿ ಮಾಡಿಕೊಂಡಾಗ ಅವರು ಪರಸ್ಪರ ನೀಡಿದ ಹಸ್ತಲಾಘವ ಇತಿಹಾಸದಲ್ಲಿ ದಾಖಲಾದ ಮೊತ್ತಮೊದಲ ಹ್ಯಾಂಡ್‌ಶೇಕ್ ಎನ್ನಲಾಗಿದೆ. ಆ ಇಬ್ಬರು ದೊರೆಗಳ ನಡುವೆ ಒಂದು ಶಾಂತಿ ಒಪ್ಪಂದ ಏರ್ಪಟ್ಟಿತ್ತು. ಅಸ್ಸೀರಿಯದ ದೊರೆಯ ಸಿಂಹಾಸನದ ಪೀಠದ ಮೇಲೆ ಅವರು ಪರಸ್ಪರ ಕೈ ಕುಲುಕುವುದನ್ನು ಕೆತ್ತಲಾಗಿದೆ.
ಹಸ್ತಲಾಘವ ಶಾಂತಿಯ ಒಂದು ಸಂಕೇತವಾಗಿ ಆರಂಭವಾಯಿತು. ಪರಸ್ಪರ ಭೇಟಿಯಾಗುವ ವ್ಯಕ್ತಿಗಳ/ಪಕ್ಷಗಳ ನಡುವೆ ಶಾಂತಿಯುತ ಉದ್ದೇಶಗಳನ್ನು ಸಂವಹಿಸುವ ಒಂದು ವಿಧಾನವಾಗಿ ಕೂಡ ಹಸ್ತಲಾಘವಗಳು ಆರಂಭವಾದವು ಎನ್ನಲಾಗಿದೆ.

ಅದೇನಿದ್ದರೂ ಆಧುನಿಕ ಹಸ್ತಲಾಘವದ ಜನಪ್ರಿಯತೆಗೆ, ಸಮಾನತೆಗಾಗಿ ಕಾರ್ಯವೆಸಗುವುದಕ್ಕೆ ಬದ್ಧವಾಗಿದ್ದ 17ನೇ ಶತಮಾನದ ಕ್ವೇಕರ್ಸ್ ಎಂಬ ಒಂದು ಕ್ರಿಶ್ಚಿಯನ್ ಪಂಥ ಮುಖ್ಯ ಕಾರಣ ಎನ್ನಲಾಗಿದೆ. ಕೈಕುಲುಕುವಾಗ ಎರಡೂ ಪಕ್ಷಗಳು ಸಮಾನ ಎನ್ನುವ ಭಾವ ವ್ಯಕ್ತವಾಗುತ್ತದೆ. 19ನೇ ಶತಮಾನದ ವೇಳೆಗೆ ಪರಸ್ಪರ ಭೇಟಿಯಾದಾಗ ಕೈಕುಲುಕುವುದು ಒಂದು ಅವಶ್ಯಕ ಶಿಷ್ಟಾಚಾರವೆಂದು ಪರಿಗಣಿಸಲ್ಪಟ್ಟ ಬಳಿಕ ಹಸ್ತಲಾಘವ ವಿಶ್ವಾದ್ಯಂತ ಗ್ರೀಟಿಂಗ್ ವಿಧಾನವಾಯಿತು.
ಯಾವುದೇ ನಾಯಕರ ಭೇಟಿ, ವ್ಯಾಪಾರೋದ್ಯಮ ಅಥವಾ ರಾಜತಾಂತ್ರಿಕ ಒಪ್ಪಂದದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಫೋಟೊ ತೆಗೆಯುವುದು ದ್ವಿಪಕ್ಷೀಯರ ಹಸ್ತಲಾಘವದ ದೃಶ್ಯವೇ ಆಗಿರುತ್ತದೆ.

ನಮ್ಮಲ್ಲಿ ಬಹುತೇಕರು ವರ್ತಮಾನದ ಪತ್ರಿಕೆಗಳಲ್ಲಿ ಹಾಗೂ ಮ್ಯಾಗಝಿನ್ ಗಳಲ್ಲಿ ಅಥವಾ ಟಿವಿಯಲ್ಲಿ ಪ್ರಕಟವಾದ, ಪ್ರಸಾರವಾದ ಐತಿಹಾಸಿಕ ಹಸ್ತಲಾಘವಗಳನ್ನು ನೆನಪಿಟ್ಟುಕೊಳ್ಳುತ್ತೇವೆ. ಉದಾಹರಣೆಗೆ ದ್ವಿತೀಯ ಮಹಾ ಸಮರ ಕೊನೆಗೊಳ್ಳುವ ಸ್ವಲ್ಪವೇ ಸಮಯದ ಮೊದಲು 1938ರಲ್ಲಿ ಹಿಟ್ಲರ್ -ಚೆಂಬರ್ಲೈನ್ ಹಸ್ತಲಾಘವ, 1979ರಲ್ಲಿ ಜಿಮ್ಮಿ ಕಾರ್ಟರ್ ಸಮ್ಮುಖದಲ್ಲಿ ಅನ್ವರ್ ಸಾದತ್-ಮೆನಾಚೆಮ್ ಬೆಜಿನ್ ಹಸ್ತಲಾಘವ ಇತ್ಯಾದಿತ್ಯಾದಿ.

ಇತ್ತೀಚೆಗೆ ಜಗತ್ತು ಟ್ರಂಪ್-ಮ್ಯಾಕ್ರೋನ್‌ರವರ ಪ್ರಸಿದ್ಧ ಹಸ್ತಲಾಘವವನ್ನು ಕಂಡಿದೆ. ಬ್ಯಾಸ್ಟಿಲ್ ದಿನಾಚರಣೆ ಸಂಭ್ರಮದ ವೇಳೆ ಈ ಇಬ್ಬರು ನಾಯಕರು ತಮ್ಮ ಪತ್ನಿಯರ ಜತೆಗೂಡಿ ಮಿಲಿಟರಿ ಪೆರೇಡ್‌ವೊಂದನ್ನು ವೀಕ್ಷಿಸುತ್ತಿದ್ದಾಗ ಸಂಗೀತ ನಿಂತಾಗ 29 ಸೆಕೆಂಡ್‌ಗಳ ಕಾಲ ಪರಸ್ಪರ ಕೈಕುಲುಕಿದ ಐತಿಹಾಸಿಕ ಕ್ಷಣ ಅದಾಗಿತ್ತು. 1901ರಲ್ಲಿ ಒಂದು ಹಸ್ತಲಾಘವ ಅಮೆರಿಕದ ಅಂದಿನ ಅಧ್ಯಕ್ಷ ವಿಲಿಯಂ ಮ್ಯಾಕಿನ್ಲಿಯವರ ಹತ್ಯೆಗೆ ಕಾರಣವಾಗಿದ್ದು ಒಂದು ಐತಿಹಾಸಿಕ ದುರಂತ. ವಸ್ತು ಪ್ರದರ್ಶನವೊಂದರಲ್ಲಿ ಮ್ಯಾಕಿನ್ಲಿ ಸಾರ್ವಜನಿಕರ ಕೈಕುಲುಕಲು ಒಪ್ಪಿಗೆ ನೀಡಿದ್ದರು. ಆಗ ಲಿಯೊನ್ ಕೊಲ್ಗೊಜ್ ಎಂಬ ಓರ್ವ ವ್ಯಕ್ತಿ ಅಧ್ಯಕ್ಷರ ಎಡಕೈ ಕುಲುಕಿ ಎರಡು ಬಾರಿ ಗುಂಡು ಹಾರಿಸಿದ. ಒಂದು ವಾರದ ಬಳಿಕ ಅಧ್ಯಕ್ಷರು ಮೃತಪಟ್ಟರು.

ಮಹಾಕವಿ ಶೇಕ್ಸ್‌ಪಿಯರ್ ಕೂಡಾ ತನ್ನ ಪ್ರಸಿದ್ಧ ನಾಟಕವಾದ ‘ಆ್ಯಸ್ ಯು ಲೈಕ್ ಇಟ್’ನಲ್ಲಿ ಎರಡು ಪಾತ್ರಗಳು ‘‘ಕೈಕುಲುಕಿ ತಾವು ಸೋದರರೆಂದು’’ ಎಂದು ಬರೆದಿದ್ದಾನೆ. ಅದೇನಿದ್ದರೂ, ಈಗ ಹಸ್ತಲಾಘವ ಜನರ ಟೀಕೆಗೆ, ಖಂಡನೆಗೆ ಗುರಿಯಾಗಿದೆ. ಕೊರೋನ ಭಯದಿಂದಾಗಿ ಜನರು ದೈಹಿಕ ಸ್ಪರ್ಶದ ಅಪಾಯಗಳನ್ನರಿತು ತಮ್ಮ ಅಂಗೈಗಳು ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ರವಾನಿಸಬಲ್ಲವೆಂಬ ಕಾರಣಕ್ಕಾಗಿ ಪರಸ್ಪರ ಕೈ ಕುಲುಕುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಹಸ್ತಲಾಘವದ ಬದಲಾಗಿ ಮೊಣಗಂಟು ಸ್ಪರ್ಶಿಸುವುದು, ಬೆನ್ನು ತಟ್ಟುವುದು, ತಲೆಬಾಗುವುದು, ಎರಡೂ ಕೈಗಳನ್ನು ಜೋಡಿಸಿ ದೂರದಿಂದಲೇ ‘ನಮಸ್ತೆ’ ಎನ್ನುವುದು ಇತ್ಯಾದಿ ಗ್ರೀಟಿಂಗ್ ವಿಧಾನಗಳು ಬಳಕೆಗೆ ಬಂದಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಹಸ್ತಲಾಘವ ತಾನೇ ಸ್ವತಃ ಇತಿಹಾಸವಾಗಿಬಿಡುತ್ತದೆಯೇ? ಕಾಲವೇ ಉತ್ತರಿಸಬೇಕು.

ಕೃಪೆ: deccanherald

Writer - ಸ್ಟಾನ್ಲಿ ಕರ್ವಾಲೊ

contributor

Editor - ಸ್ಟಾನ್ಲಿ ಕರ್ವಾಲೊ

contributor

Similar News