ಸುಳ್ಳು ಸುದ್ದಿಗಳ ಸೃಷ್ಟಿಕರ್ತನೇ ಅದಕ್ಕೆ ನಿಯಂತ್ರಣ ಹೇರಬಲ್ಲನೆ?

Update: 2020-11-19 05:12 GMT

‘‘ಸುದ್ದಿ ವಾಹಿನಿಗಳು ಮತ್ತು ಇತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ ಒಡ್ಡಲು ವ್ಯವಸ್ಥೆ ರೂಪಿಸಿ’’ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ‘ತಬ್ಲೀಗಿ ಜಮಾತ್‌ನಿಂದ ಕೋವಿಡ್ ಹರಡಿತು’ ಎಂಬ ಮಾಧ್ಯಮಗಳ ಅಪಪ್ರಚಾರದ ಕುರಿತಂತೆ ವಿಚಾರಣೆ ನಡೆಸುತ್ತಾ ಸುಪ್ರೀಂ ಕೋರ್ಟ್ ಈ ಸೂಚನೆಯನ್ನು ನೀಡಿದೆ. ‘‘ಸುದ್ದಿವಾಹಿನಿಗಳಲ್ಲಿ ಸುಳ್ಳು ಸುದ್ದಿಗಳನ್ನು ತಡೆಯಲು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆಯಡಿ ಯಾವ ಕ್ರಮ ತೆಗೆದುಕೊಂಡಿದ್ದೀರಿ, ಮಾಹಿತಿ ನೀಡಿ’’ ಎಂದು ಸುಪ್ರೀಕೋರ್ಟ್ ಸೂಚನೆ ನೀಡಿತ್ತು. ಆದರೆ ಕೇಂದ್ರ ಸರಕಾರ ‘ಅಭಿವ್ಯಕ್ತಿ ಸ್ವಾತಂತ್ರ’ದ ಹೆಸರಿನಲ್ಲಿ ಹಾರಿಕೆಯ ಉತ್ತರವನ್ನು ನೀಡಿತ್ತು. ವಿಪರ್ಯಾಸವೆಂದರೆ, ಯಾವೆಲ್ಲ ವೆಬ್‌ಸೈಟ್‌ಗಳು ಸತ್ಯ ಹೇಳಿದ ಕಾರಣಕ್ಕಾಗಿ ಸರಕಾರದಿಂದ ಕಿರುಕುಳಕ್ಕೆ ಒಳಗಾಗಿದ್ದವೋ, ಆ ವೆಬ್‌ಸೈಟ್‌ಗಳೆಲ್ಲವೂ ‘ತಬ್ಲೀಗಿ ಪ್ರಕರಣ’ವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದ್ದವು. ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ‘ದಿ ಪ್ರಿಂಟ್’, ‘ದಿ ವೈರ್’ನಲ್ಲಿ ಬಂದ ಸುದ್ದಿಗಳನ್ನೇ ಮುಂದಿಟ್ಟು, ಪತ್ರಿಕೆಗಳು ನಿಖರವಾಗಿ ವರದಿ ಮಾಡಿವೆ ಎಂದು ನ್ಯಾಯಾಲಯದ ಮುಂದೆ ಹೇಳಿತು. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದೂ ಸರಕಾರ ಹೇಳಿದೆ. ಆದರೆ ಹಾಗೆ ಕೈಗೊಂಡ ಕ್ರಮಗಳ ಕುರಿತಂತೆ ವಿವರಿಸಲು ನ್ಯಾಯಾಲಯದ ಮುಂದೆ ಸರಕಾರ ವಿಫಲವಾಗಿದೆ.

ವಿಪರ್ಯಾಸವೆಂದರೆ, ಸುಳ್ಳು ಸುದ್ದಿಗೆ ನ್ಯಾಯಾಲಯ ಕೇವಲ ಮಾಧ್ಯಮಗಳನ್ನಷ್ಟೇ ಹೊಣೆಯಾಗಿಸಿದೆ. ಈ ಸುಳ್ಳು ಸುದ್ದಿಗಳ ಹಿಂದೆ ವ್ಯವಸ್ಥಿತವಾಗಿ ರಾಜಕೀಯ ಶಕ್ತಿಗಳು ಕೆಲಸ ಮಾಡಿವೆ ಎನ್ನುವುದು ನ್ಯಾಯಾಲಯಕ್ಕೆ ಅರಿವಿಲ್ಲದ ಸಂಗತಿಯೇನೂ ಅಲ್ಲ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸಚಿವರು ಬಹಿರಂಗವಾಗಿಯೇ ‘ತಬ್ಲೀಗಿಗಳಿಂದ ಕೊರೋನಹರಡಿತು’ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಂತೂ ಮುಸ್ಲಿಮರು ಅಧಿಕ ಇರುವ ಪ್ರದೇಶಗಳನ್ನೇ ಗುರಿಯಾಗಿಸಿ ಹೇಳಿಕೆಗಳನ್ನು ನೀಡಿದ್ದರು. ಸರಕಾರವೇ ಈ ಸುಳ್ಳು ಹರಡುವಿಕೆಯಲ್ಲಿ ಪಾಲುದಾರನಾಗಿರುವಾಗ, ಮಾಧ್ಯಮಗಳ ಮೇಲೆ ಅದು ಯಾಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ? ತಬ್ಲೀಗಿಗಳಿಂದ ಕೊರೋನಾ ಹರಡಿತು ಎಂದು ಸಾರ್ವಜನಿಕ ಭಾಷಣಗಳಲ್ಲಿ ಆರೋಪಿಸಿದ್ದ ರಾಜಕಾರಣಿಗಳ ವಿರುದ್ಧ ಯಾಕೆ ನ್ಯಾಯಾಲಯ ಕಿಡಿಕಾರಲಿಲ್ಲ? ಸರಿಯಾದ ಸಮಯ, ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ದಿಗ್ಬಂಧನ ವಿಧಿಸಬೇಕಾಗಿದ್ದ ಸರಕಾರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜನೆಯಲ್ಲಿ ಮುಳುಗಿತ್ತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿಯೇ ಸರಕಾರ ಮಾಧ್ಯಮಗಳ ಮೂಲಕ ‘ತಬ್ಲೀಗಿ ಕೊರೋನಾ’ವನ್ನು ಹರಡಿಸಿತು.

ಸರಕಾರದ ಮುಖವಾಣಿಯಂತೆ ವರದಿಗಳನ್ನು ಬಿತ್ತರಿಸುತ್ತಿದ್ದ ಮಾಧ್ಯಮಗಳಷ್ಟೇ ಈ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡಿದ್ದವು. ಇದರಿಂದಾಗಿ ಭಾರತದಲ್ಲಿ ಕೊರೋನ ರೋಗವು ಧರ್ಮದ ಮೂಲಕ ಗುರುತಿಸಲ್ಪಟ್ಟಿತು. ಹಲವೆಡೆ ‘ಮುಸ್ಲಿಮರಿಗೆ ಪ್ರವೇಶವಿಲ್ಲ’ ಎಂದು ಬ್ಯಾನರ್‌ಗಳನ್ನು ಹಾಕಿ ದ್ವೇಷವನ್ನು ಕಾರಲಾಯಿತು. ಆದರೆ ಕೊರೋನಮಾತ್ರ ಯಾವುದೇ ಧರ್ಮ ಭೇದವಿಲ್ಲದೆ ಒಳ ಪ್ರವೇಶಿಸಿತು. ಕೊರೋನವನ್ನು ತನ್ನ ರಾಜಕೀಯಕ್ಕೆ ಬಳಸುವ ಮೂಲಕ ಭಾರತ ವಿಶ್ವದಲ್ಲಿ ತೀವ್ರ ಅವಮಾನಕ್ಕೊಳಗಾಯಿತು. ಇದೀಗ ಕೆಲವು ಸಂತ್ರಸ್ತರು ನ್ಯಾಯಾಲಯದ ಮೊರೆ ಹೋದ ಬಳಿಕ ‘ಸುಳ್ಳು ಸುದ್ದಿ’ಗಳ ಕುರಿತಂತೆ ಸುಪ್ರೀಂಕೋರ್ಟ್ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸುಳ್ಳು ಸುದ್ದಿಗಳಿಗೆ ಕುಖ್ಯಾತರಾಗಿದ್ದ ಅರ್ನಬ್ ಗೋಸ್ವಾಮಿಗೆ ಇದೇ ಸುಪ್ರೀಂಕೋರ್ಟ್ ‘ಅಭಿವ್ಯಕ್ತಿ ಸ್ವಾತಂತ್ರ’ದ ಹೆಸರಿನಲ್ಲಿ ಆತುರಾತುರವಾಗಿ ಜಾಮೀನು ಇತ್ತೀಚೆಗೆ ನೀಡಿತ್ತು. ಆದರೆ ಹತ್ರಾಸ್‌ನಲ್ಲಿ ಸತ್ಯ ಸುದ್ದಿಗಳನ್ನು ವರದಿ ಮಾಡಿದ ಕಾರಣಕ್ಕಾಗಿ ಬಂಧಿತರಾಗಿದ್ದ ವರದಿಗಾರರ ಬಗ್ಗೆ ನ್ಯಾಯಾಲಯ ಇಷ್ಟೊಂದು ಆಸಕ್ತಿ ವಹಿಸಲಿಲ್ಲ. ಇಷ್ಟಕ್ಕೂ ಅರ್ನಬ್ ಬಂಧನವಾಗಿರುವುದೇ ಅಭಿವ್ಯಕ್ತಿಯ ಕಾರಣಕ್ಕಾಗಿಯಲ್ಲ. ವಂಚನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅರ್ನಬ್‌ರನ್ನು ಬಂಧಿಸಿದ್ದರು. ಈ ಪತ್ರಕರ್ತ ಕೆಲವು ವರ್ಷಗಳಿಂದ ತನ್ನ ಚಾನೆಲ್‌ನ್ನು ಪ್ರಚೋದಕ ಮತ್ತು ಕಪೋಲಕಲ್ಪಿತ ಸುದ್ದಿಗಳನ್ನು ಹರಡುವುದಕ್ಕಾಗಿಯೇ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಟಿಆರ್‌ಪಿ ವಂಚನೆಯಂತಹ ಆಘಾತಕಾರಿ ಪ್ರಕರಣದಲ್ಲೂ ಅರ್ನಬ್ ಆರೋಪಿಯಾಗಿದ್ದಾರೆ. ಇಂತಹ ವ್ಯಕ್ತಿಗೆ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡುತ್ತೆಯಾದರೆ, ‘ಸುಳ್ಳು ಸುದ್ದಿಯ ಕುರಿತಂತೆ’ ಸುಪ್ರೀಂಕೋರ್ಟ್‌ನ ಆತಂಕ, ಕಳವಳವನ್ನು ನಾವು ಪ್ರಾಮಾಣಿಕವೆಂದು ನಂಬುವುದು ಹೇಗೆ?

‘‘ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೇ ಇದ್ದರೆ, ಒಂದು ವ್ಯವಸ್ಥೆಯನ್ನು ರೂಪಿಸಿ’’ ಎಂದು ನ್ಯಾಯಾಲಯ ಹೇಳುತ್ತದೆ. ಸರಕಾರವೇ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲು ಮಾಧ್ಯಮಗಳಿಗೆ ಕುಮ್ಮಕ್ಕು ಕೊಡುತ್ತಿರುವಾಗ, ಅಂತಹದೊಂದು ವ್ಯವಸ್ಥೆಯನ್ನು ರೂಪಿಸಿದರೂ, ಅದರ ಬಲಿಪಶುಗಳಾಗುವುದು ಮತ್ತೆ ಸರಕಾರದ ವಿರುದ್ಧ ಬರೆಯುವ ಮಾಧ್ಯಮಗಳೇ ಆಗಿವೆ. ಸರಕಾರ ರೂಪಿಸುವ ವ್ಯವಸ್ಥೆ, ತನ್ನ ವಿರುದ್ಧ ಬರೆದ ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕೇ ಬಳಕೆಯಾಗಬಹುದು. ಇತ್ತೀಚೆಗೆ ಗುಜರಾತ್‌ನಲ್ಲಿ ಕೊರೋನ ಹರಡುವಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿದ್ದಕ್ಕಾಗಿ ಪತ್ರಕರ್ತರೊಬ್ಬರ ಮೇಲೆ ‘ರಾಜದ್ರೋಹ’ದ ಪ್ರಕರಣವನ್ನು ದಾಖಲಿಸಲಾಯಿತು.

ನ್ಯಾಯಾಲಯದಲ್ಲಿ ಆತ ನಿಶ್ಶರ್ಥವಾಗಿ ಕ್ಷಮೆ ಯಾಚಿಸಿದ ಬಳಿಕವಷ್ಟೇ ಆತನನ್ನು ಬಿಡುಗಡೆಗೊಳಿಸಲಾಯಿತು. ಆದರೆ, ಸುಳ್ಳು ವರದಿಗಳನ್ನು ಮಾಡಿದ ಯಾವುದೇ ಪತ್ರಕರ್ತನ ಮೇಲೆ ಈವರೆಗೆ ಸರಕಾರ ಪ್ರಕರಣವನ್ನು ದಾಖಲಿಸಿದ ಉದಾಹರಣೆ ಇಲ್ಲ. ಆದುದರಿಂದ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ, ಸುಳ್ಳುಗಳನ್ನು ಪ್ರಚಾರ ಮಾಡುತ್ತಲೇ ಬದುಕಿ ಉಳಿದಿರುವ ಸರಕಾರ ‘ಸುಳ್ಳು ಸುದ್ದಿಯ ನಿಯಂತ್ರಣಕ್ಕೆ’ ವ್ಯವಸ್ಥೆಯೊಂದನ್ನು ರೂಪಿಸಿದರೆ, ಅದರ ಬಲಿಪಶು ಸತ್ಯ ಹೇಳುವ ಪತ್ರಿಕೆಗಳೇ ಆಗಿರುತ್ತವೆ. ಅರ್ನಬ್ ಪ್ರಕರಣದಲ್ಲಿ ಅತ್ಯಂತ ಉದಾರತೆಯನ್ನು ಸುಪ್ರೀಂಕೋರ್ಟ್ ಪ್ರದರ್ಶಿಸಿರುವುದರ ಹಿಂದೆ ಸರಕಾರದ ಒತ್ತಡ ಇದೆ ಎನ್ನುವ ಆರೋಪಗಳಿವೆ. ಈ ಪ್ರಕರಣದಲ್ಲಿ ನ್ಯಾಯಾಲಯವನ್ನು ವ್ಯಂಗ್ಯ ಮಾಡಿದ ಕುನಾಲ್ ಕಾಮ್ರಾನ ಅಭಿವ್ಯಕ್ತಿ ಸ್ವಾತಂತ್ರದ ಕುರಿತಂತೆ ನ್ಯಾಯಾಲಯ ವೌನವಾಗಿದೆ. ಮಾಧ್ಯಮಗಳನ್ನು ನಿಯಂತ್ರಿಸಿ ಎಂದು ಸರಕಾರಕ್ಕೆ ಸೂಚನೆ ನೀಡುತ್ತಿರುವ ಸುಪ್ರೀಂಕೋರ್ಟ್ ಒಂದನ್ನು ಗಮನಿಸಬೇಕು. ಇಂದು ಸರಕಾರ ಮಾಧ್ಯಮವನ್ನು ನಿಯಂತ್ರಿಸುತ್ತಿರುವುುದರಿಂದ ಸುಳ್ಳು ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಯಾವಾಗ ರಾಜಕೀಯ ನಿಯಂತ್ರಣದಿಂದ ಮಾಧ್ಯಮಗಳು ಮುಕ್ತವಾಗುತ್ತವೆಯೋ ಆಗ ಮಾಧ್ಯಮಗಳು ಸತ್ಯವನ್ನು ಮಾತನಾಡಲು ಶುರು ಹಚ್ಚಿಕೊಳ್ಳುತ್ತವೆ. ಅಲ್ಲಿಯವರೆಗೆ ಸತ್ಯಗಳೆಲ್ಲ ಸರಕಾರದ ಪಾಲಿಗೆ ಸುಳ್ಳುಗಳಾಗಿಯೇ ಇರುತ್ತದೆ. ಸುಳ್ಳುಗಳಷ್ಟೇ ಸತ್ಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News