ಕರ್ತವ್ಯಕ್ಕೆ ತೆಗೆದುಕೊಳ್ಳದೆ ಸರಕಾರದ ಆದೇಶದ ಉಲ್ಲಂಘನೆ : ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರ ಆರೋಪ

Update: 2020-11-20 08:08 GMT

ಬೆಂಗಳೂರು, ನ. 20: ‘ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ‘ಲಾಕ್‌ಡೌನ್’ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದೆ ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿದೆ. ಅಲ್ಲದೆ, ಸರಕಾರದ ಕೊರೋನ ಮಾರ್ಗಸೂಚಿಗೆ ವಿರುದ್ಧವಾಗಿ ಕೋವಿಡ್-19 ರಜೆ ನೀಡುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿಯ ಉದ್ದಟತನಕ್ಕೆ ಸಾಕ್ಷಿ’ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ ಎಂಪ್ಲಾಯಿಸ್ಸ್ ಯೂನಿಯನ್ (ಟಿಕೆಎಂಇಯು) ಅಧ್ಯಕ್ಷ ಪ್ರಸನ್ನ ಕುಮಾರ್ ಸಿ.ಎಸ್.ಚಕ್ಕೆರೆ ಆರೋಪಿಸಿದ್ದಾರೆ.

ಶುಕ್ರವಾರ ಕಾರ್ಖಾನೆ ಮುಂಭಾಗದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆ ಆಡಳಿತ ಮಂಡಳಿ ರಾಜ್ಯ ಸರಕಾರದ ಆದೇಶದ ಉಲ್ಲಂಘನೆ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಾಗೂ ಕಾರ್ಮಿಕರ ಶೋಷಣೆಯ ವಿರುದ್ಧ ರಾಜ್ಯ ಸರಕಾರ, ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧಪಟ್ಟವರು ಕೂಡಲೇ ಮಧ್ಯಪ್ರವೇಶಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು. ಅಲ್ಲದೆ, ಕಾರ್ಖಾನೆಯಲ್ಲಿ ಕಾರ್ಮಿಕರು ಯಾವುದೇ ಕಿರುಕುಳ ಮತ್ತು ಒತ್ತಡವಿಲ್ಲದೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಖಾನೆಯ ಕಿರುಕುಳ ಮತ್ತು ಒತ್ತಡ ತಂತ್ರವನ್ನು ಪ್ರಶ್ನಿಸಿದ ಕಾರಣಕ್ಕೆ ಆಡಳಿತ ಮಂಡಳಿ ಹನ್ನೆರಡು ದಿನಗಳ ಹಿಂದೆ (ನ.10) ಏಕಾಏಕಿ ಲಾಕ್‌ಔಟ್ ಘೋಷಣೆ ಮಾಡಿತ್ತು. ಆ ಬಳಿಕ ಸರಕಾರದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಲಾಕ್‌ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಯನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿತ್ತು. ಹೀಗಾಗಿ ನಾವು ಕರ್ತವ್ಯಕ್ಕೆ ಹಾಜರಾಗಲು ಕಾರ್ಖಾನೆ ಗೇಟ್‌ಗೆ ಆಗಮಿಸಿದ್ದೇವೆ. ಆದರೆ, ಕಾರ್ಮಿಕರನ್ನು ಆಡಳಿತ ಮಂಡಳಿ ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂದು ಪ್ರಸನ್ನ ಕುಮಾರ್ ದೂರಿದರು.

‘ಕರ್ತವ್ಯದಲ್ಲಿದ್ದ ವೇಳೆ ಕಾರ್ಮಿಕರು ಮೊಬೈಲ್ ಬಳಕೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದು, ಇದನ್ನು ಎಲ್ಲರೂ ಪಾಲನೆ ಮಾಡಬೇಕು. ಆದರೆ, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ಹಾಕುವುದು ವಾಡಿಕೆ. ಆದರೆ, ಆಡಳಿತ ಮಂಡಳಿ ಮೊಬೈಲ್ ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದೆ. ಕಾರ್ಮಿಕರಿಗೆ ವಿನಾಕಾರಣ ಕಿರುಕುಳ ನೀಡುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ. ಇವರ ಉದ್ದಟತನವನ್ನು ಇನ್ನೂ ಎಲ್ಲಿಯವರೆಗೆ ಕಾರ್ಮಿಕರ ಸಹಿಸಿಕೊಳ್ಳಬೇಕು’ ಎಂದು ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲು ಕೂಡಲೇ ಅವಕಾಶ ನೀಡಬೇಕು. ಕೋವಿಡ್-19 ಮಾರ್ಗಸೂಚಿ ಅನ್ವಯ ಸೋಂಕಿತರಿಗೆ ರಜೆ ಸಹಿತ ಇನ್ನಿತರ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರನ್ನು ಆಡಳಿತ ಮಂಡಳಿ ಮನುಷ್ಯರೆಂದು ಪರಿಗಣಿಸಿ ದುಡಿಸಿಕೊಳ್ಳಬೇಕು. ಆಡಳಿತ ಮಂಡಳಿಯ ಒತ್ತಡ ಮತ್ತು ಅಮಾನವೀಯ ಕಿರುಕುಳ, ವಿನಾಕಾರಣ ವಿಧಿಸುವ ಷರತ್ತುಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಸನ್ನ ಕುಮಾರ್ ಇದೇ ವೇಳೆ ಒತ್ತಾಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News