ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ: ಯಡಿಯೂರಪ್ಪ

Update: 2020-11-20 12:35 GMT

ಬೆಂಗಳೂರು, ನ.20: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ನಗರದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪದಕ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಠಾಣೆಗಳಿಗೆ ಜನ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ನಿರ್ಭೀತಿಯಿಂದ ಬರುವಂತಹ ವಾತಾವರಣ ನಿರ್ಮಾಣ ಮಾಡುವಂತೆ ಆಗ ಬೇಕು. ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ರಾಜ್ಯದ ಪೊಲೀಸರು ಕಾನೂನು ಸುವ್ಯವಸ್ಥೆ, ನಿರ್ವಹಣೆ, ಸಂಚಾರ ಸುರಕ್ಷತೆ, ಮುಕ್ತ ವಾರ್ತೆ ಸಂಗ್ರಹ, ಎಲ್ಲದರಲ್ಲಿಯೂ ತಮ್ಮ ವೃತ್ತಿ ನಿಪುಣತೆಯನ್ನು ತೋರಿದ್ದಾರೆ. ಸಮಾಜದ ಸ್ವಾಸ್ಥ್ಯ ಕದಡುವ ಸಮಾಜಘಾತುಕ ಶಕ್ತಿಗಳು, ಸಂಘಟಿತ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಹಗಲಿರುಳೂ ಶ್ರಮಿಸುತ್ತಿರುವುದು ಅಭಿನಂದನೀಯ ಎಂದರು.

ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಸರಕಾರ ಒತ್ತು ಕೊಟ್ಟಿದೆ. ಪೊಲೀಸರ ಗೃಹ ನಿರ್ಮಾಣ ಯೋಜನೆಗೂ ಚಾಲನೆ ನೀಡಿದ್ದೇವೆ ಎಂದ ಅವರು, ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು, ಜನಸಾಮಾನ್ಯರು ನಿರ್ಭೀತಿಯಿಂದ ಪೊಲೀಸ್ ಠಾಣೆಗೆ ಬರುವಂತಾಗಬೇಕು ಎಂದು ನುಡಿದರು.

ಕರ್ನಾಟಕ ಪೊಲೀಸ್ ಎಂದರೆ, ಅತ್ಯಂತ ವಿಶ್ವಾಸಾರ್ಹ ಹಾಗೂ ದಕ್ಷ ಪಡೆ ಎಂದೇ ಹೆಸರುಪಡೆದಿದೆ. ರಾಜ್ಯದ ಪೊಲೀಸರು ನಿಸ್ವಾರ್ಥ ಸೇವೆ ಯಿಂದ ಕರ್ತವ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

10 ಸಾವಿರ ರೂ. ಬಹುಮಾನ: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಪರಿಹಾರ ಕೇಂದ್ರಗಳಾಗಿ ರೂಪಿಸಲಾಗುತ್ತಿದೆ. ಇನ್ನು, ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸರಿಗೆ ಮುಂದಿನ ದಿನಗಳಲ್ಲಿ ಪದಕದ ಜೊತೆಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಅವರು ಪ್ರಕಟಿಸಿದರು.

ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

2017ನೆ ಸಾಲಿನ 117 ಮಂದಿ ಪೊಲೀಸರು ಹಾಗೂ 2018ನೆ ಸಾಲಿನ 120 ಮಂದಿ ಒಟ್ಟು 237 ಮಂದಿ ಪೊಲೀಸರಿಗೆ ಸಿಎಂ ಪದಕ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News