ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್‌ರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2020-11-20 11:31 GMT

ಬೆಂಗಳೂರು, ನ.20: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ‌ಮೂರ್ತಿ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸಂಪತ್‌ರಾಜ್ ರನ್ನು ಸಿಸಿಬಿ ಪೊಲೀಸರು ನಾಲ್ಕು ದಿನಗಳ ಹಿಂದೆ ಬಂಧಿಸಿದ್ದರು. ಮೂರು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ಶುಕ್ರವಾರ ನಗರದ 67ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಾತ್ಯಾಯಿನಿ ಅವರು ಆರೋಪಿ ಸಂಪತ್ ರಾಜ್ ನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಎನ್‌ಐಎ ಪರ ವಾದಿಸಿದ ವಕೀಲ ಪಿ. ಪ್ರಸನ್ನ ಕುಮಾರ್ ಅವರು, ಆರೋಪಿಯನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಆರೋಪಿಯನ್ನು 23 ಮತ್ತು 24 ರಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೇ ವಿಚಾರಣೆ ನಡೆಸಲು ಅವಕಾಶ ನೀಡಿತು.

ಇನ್ನು ಸಂಪತ್ ರಾಜ್ ಪರ ವಕೀಲರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಾರದು. ಬದಲಿಗೆ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಕೋರಿದರು. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿಗೆ ಸೂಚಿಸಿದ ನ್ಯಾಯಾಧೀಶರು ವಿಚಾರಣೆಯನ್ನು ನ.24ಕ್ಕೆ ಮುಂದೂಡಿದರು. ನ.24ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಜಾಮೀನು ಮಂಜೂರಾಗುವರೆಗೂ ಸಂಪತ್ ರಾಜ್ ಜೈಲುವಾಸ ಅನುಭವಿಸಬೇಕಿದೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ವೇಳೆ ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿಸಿದ ಆರೋಪ ಸಂಪತ್ ರಾಜ್ ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದರು. ಇದೇ ವೇಳೆ ತನಗೆ ಅನಾರೋಗ್ಯ ಎಂದು ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಬಳಿಕ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಯಿಂದ ಪರಾರಿಯಾಗಿದ್ದರು.

ಇದರ ನಡುವೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯೂ ಪುರಸ್ಕೃತಗೊಂಡಿರಲಿಲ್ಲ. ಆ ಬಳಿಕ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದರು. ಗಲಭೆ ಸಂಬಂಧಿತ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಆರೋಪಿ ಸಂಪತ್ ರಾಜ್ ನ್ನು ಬಂಧಿಸಲು ಪೊಲೀಸರು ಲಭ್ಯವಿರುವ ಎಲ್ಲ ಕ್ರಮ ಜರುಗಿಸಬೇಕು ಎಂದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News