ಶುಐಬ್ ಮಲಿಕ್, ಹಫೀಝ್, ರಿಯಾಝ್, ಆಮಿರ್ ವೇತನ ಏರಿಕೆ

Update: 2020-11-21 17:43 GMT

ಕರಾಚಿ, ನ.21: ಪಾಕಿಸ್ತಾನದ ಹಿರಿಯ ಕ್ರಿಕೆಟಿಗರಾದ ಶುಐಬ್ ಮಲಿಕ್, ಮುಹಮ್ಮದ್ ಹಫೀಝ್, ವಹಾಬ್ ರಿಯಾಝ್ ಮತ್ತು ಮುಹಮ್ಮದ್ ಆಮಿರ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೇಂದ್ರ ಒಪ್ಪಂದಗಳನ್ನು ನಿರಾಕರಿಸಿದ್ದರೂ, ಅವರ ವೇತನ ಹೆಚ್ಚಳವಾಗಿದೆ.

ಕೇಂದ್ರ ಒಪ್ಪಂದಗಳನ್ನು ಹೊಂದಿರದ ಕಾರಣ ಅವರು ಇನ್ನು ಮುಂದೆ ‘ಎ’ ವಿಭಾಗದಲ್ಲಿ ವೇತನ ಪಡೆಯಲಿದ್ದಾರೆ. ಈ ತನಕ ಅವರು ‘ಸಿ’ ವಿಭಾಗದಲ್ಲಿ ವೇತನ ಪಡೆಯುತ್ತಿದ್ದರು. ‘ಎ’ ವಿಭಾಗದಲ್ಲಿ ನಾಲ್ವರು ಈಗ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಏಕದಿನ ಪಂದ್ಯಗಳಿಗೆ ಸುಮಾರು 4,60,000 ರೂಪಾಯಿ ಮತ್ತು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಕ್ಕೆ 3,30,000ರೂಪಾಯಿ ವೇತನ ಪಡೆಯಲಿದ್ದಾರೆ.

ಆದಾಗ್ಯೂ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ವಿದೇಶಿ ಟ್ವೆಂಟಿ-20 ಲೀಗ್ ಒಪ್ಪಂದಗಳನ್ನು ಕಳೆದುಕೊಂಡಿದ್ದಕ್ಕಾಗಿ ಪರಿಹಾರವನ್ನು ನೀಡಬೇಕೆಂದು ಪಾಕ್ ಆಟಗಾರರು ಮಾಡಿರುವ ಮತ್ತೊಂದು ವಿನಂತಿಯನ್ನು ಮಂಡಳಿ ಸ್ವೀಕರಿಸಲಿಲ್ಲ.

ಇದಕ್ಕಾಗಿ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಮಂಡಳಿ ಹೇಳಿದೆ ಮತ್ತು ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಹೇಳಿದರು.

 ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ತಂಡದಲ್ಲಿ ಪಡೆದ ನಂತರ ಹಫೀಝ್ ಶ್ರೀಲಂಕಾದ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿಯಬೇಕಾಗಿರುವುದರಿಂದ ಸುಮಾರು 10 ಮಿಲಿಯನ್ ರೂಪಾಯಿಗಳ ನಷ್ಟವನ್ನು ಅನುಭವಿಸಿದರು.

ನ್ಯೂಝಿಲ್ಯಾಂಡ್‌ನಲ್ಲಿ ತಡವಾಗಿ ತಂಡವನ್ನು ಸೇರಲು ಅವಕಾಶ ನೀಡಬೇಕೆಂದು ಹಫೀಝ್ ಮಾಡಿರುವ ಮನವಿಯನ್ನು ಮಂಡಳಿ ಸ್ವೀಕರಿಸಲಿಲ್ಲ.

 ಮುಹಮ್ಮದ್ ಅಮಿರ್ ಮತ್ತು ಮಲಿಕ್ ಅವರು ಇದೀಗ ಲಂಕಾ ಪ್ರೀಮಿಯರ್ ಲೀಗ್‌ಗಾಗಿ ಶ್ರೀಲಂಕಾಕ್ಕೆ ಹೋಗಿದ್ದಾರೆ. ಯಾಕೆಂದರೆ ಅವರು ನ್ಯೂಝಿಲ್ಯಾಂಡ್ ಪ್ರವಾಸ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News