ಎಲ್ಲಿಯಾದರೂ ಬ್ಯಾಟಿಂಗ್ ಮಾಡಲು ಸಿದ್ಧ: ರೋಹಿತ್ ಶರ್ಮಾ

Update: 2020-11-22 18:32 GMT

ಬೆಂಗಳೂರು: ‘‘ನಾನು ಆಸ್ಟ್ರೇಲಿಯಕ್ಕೆ ತಲುಪಿದ ನಂತರ ಏನಾಗಲಿದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾದ ಕಲ್ಪನೆ ಇರುತ್ತದೆ. ಎಲ್ಲಿಯಾದರೂ ಸರಿ ಬ್ಯಾಟಿಂಗ್ ಮಾಡಲು ನಾನು ತಯಾರಾಗಿದ್ದೇನೆ’’ ಎಂದು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.

   ಟೆಸ್ಟ್ ಓಪನರ್ ಆಗಿ ಯಶಸ್ಸು ಗಳಿಸಿರುವ ರೋಹಿತ್ ಶರ್ಮಾ ತಂಡದ ಅಗತ್ಯಕ್ಕೆ ತಕ್ಕಂತೆ ಆಸ್ಟ್ರೇಲಿಯ ವಿರುದ್ಧದ ನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಸ್ಥಾನದ ಬಗ್ಗೆ ಮೃದುವಾಗಿರಲು ಸಿದ್ಧರಾಗಿದ್ದಾರೆ.

   ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಂತರ ಭಾರತಕ್ಕೆ ಮರಳಿದ ಬಳಿಕ ರೋಹಿತ್ ಶರ್ಮಾ ಅವರು ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರೊಂದಿಗೆ ತಂಡದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ.

‘‘ನಾನು ಈ ಸಮಯದಲ್ಲಿ ಎಲ್ಲರಿಗೂ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ತಂಡವು ನನ್ನನ್ನು ಬಯಸಿದ ರೀತಿ ಬ್ಯಾಟಿಂಗ್ ಮಾಡಲು ನನಗೆ ಸಂತೋಷವಾಗುತ್ತದೆ. ಆದರೆ ಓಪನರ್ ಆಗಿ ನನ್ನ ಪಾತ್ರವನ್ನು ಮ್ಯಾನೇಜ್‌ಮೆಂಟ್ ಬದಲಾಯಿಸುತ್ತದೋ ಇಲ್ಲವೋ ನನಗೆ ತಿಳಿದಿಲ್ಲ’’ಎಂದು ರೋಹಿತ್ ಶರ್ಮಾ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

 ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಫಿಟ್‌ನೆಸ್ ತರಬೇತಿ ಪೂರ್ಣಗೊಳಿಸಿ,ತಾನು ಆಸ್ಟ್ರೇಲಿಯಕ್ಕೆ ತೆರಳುವ ಹೊತ್ತಿಗೆ ತಂಡದ ಮ್ಯಾನೇಜ್‌ಮೆಂಟ್ ತಾನು ತಂಡದಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ತೀರ್ಮಾನಿಸುತ್ತದೆ ಎಂದು ರೋಹಿತ್ ಶರ್ಮಾ ನಂಬಿದ್ದಾರೆ.

ಐಪಿಎಲ್ ಸಮಯದಲ್ಲಿ ಅವರು ಮಂಡಿರಜ್ಜು ಗಾಯದ ಸಮಸ್ಯೆ ಎದುರಿಸಿದ್ದರು.

‘‘ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದ ಬಳಿಕ ತಂಡದ ಆಯ್ಕೆಗಳು ಯಾವವು ಮತ್ತು ಇನಿಂಗ್ಸ್ ತೆರೆಯುವವರು ಯಾರು ಎಂದು ಆಸ್ಟ್ರೇಲಿಯಕ್ಕೆ ತೆರಳಿರುವ ಆಟಗಾರರು ತಿಳಿದುಕೊಂಡಿದ್ದಾರೆ ’’ ಎಂದು ರೋಹಿತ್ ಹೇಳಿದರು.

  32 ಟೆಸ್ಟ್ ಪಂದ್ಯಗಳಲ್ಲಿ 46ಕ್ಕಿಂತ ಹೆಚ್ಚು ರನ್ ಸರಾಸರಿಯನ್ನು ಹೊಂದಿರುವ ಡ್ಯಾಶಿಂಗ್ ಬ್ಯಾಟ್ಸ್‌ಮನ್ ರೋಹಿತ್ ಅವರು ಹುಕ್ ಮತ್ತು ಪುಲ್ ಶಾಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯದ ಪಿಚ್‌ನಲ್ಲಿ ಚೆಂಡು ಪುಟಿದೇಳುವುದು ಕೆಲವೊಮ್ಮೆ ದೊಡ್ಡ ಅಂಶವಲ್ಲ ಎಂದು ತಿಳಿದುಕೊಂಡಿದ್ದಾರೆ.

 ‘‘ ನಾವು ಬೌನ್ಸ್ ಬಗ್ಗೆ ಮಾತನಾಡುತ್ತೇವೆ. ಆದರೆ ಪರ್ತ್ ಹೊರತುಪಡಿಸಿ, ಉಳಿದ ಕ್ರೀಡಾಂಗಣಗಳಲ್ಲಿ (ಅಡಿಲೇಡ್, ಎಂಸಿಜಿ, ಎಸ್‌ಸಿಜಿ) ಅಷ್ಟು ಬೌನ್ಸ್ ಇಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News