ನಾಲ್ಕು ರಾಜ್ಯಗಳಿಂದ ಕೊರೋನ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂಕೋರ್ಟ್

Update: 2020-11-23 16:42 GMT

ಹೊಸದಿಲ್ಲಿ, ನ.23: ದಿಲ್ಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ಕೈಮೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಸ್ಥಿತಿಗತಿ ವರದಿಯನ್ನು 2 ದಿನದೊಳಗೆ ಸಲ್ಲಿಸುವಂತೆ ಈ ರಾಜ್ಯಗಳಿಗೆ ಸೂಚಿಸಿದೆ.

ದಿಲ್ಲಿಯಲ್ಲಿ ಪರಿಸ್ಥಿತಿ, ವಿಶೇಷವಾಗಿ ನವೆಂಬರ್‌ನಲ್ಲಿ ಹದಗೆಟ್ಟಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸಿ ಎಂದು ದಿಲ್ಲಿ ಸರಕಾರದ ಪ್ರತಿನಿಧಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್‌ಗೆ ನ್ಯಾಯಾಲಯ ಸೂಚಿಸಿತು. ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿತು.

ಕೊರೋನದಿಂದ ಅತ್ಯಧಿಕ ಸಮಸ್ಯೆಗೊಳಗಾಗಿದ್ದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸೋಂಕಿನ ಹೊಸ ಪ್ರಕರಣಗಳು ನಿರಂತರ ಕಡಿಮೆಯಾಗುತ್ತಿದ್ದರೂ, ಮೇಲೆ ತಿಳಿಸಿದ 4 ರಾಜ್ಯಗಳಲ್ಲಿ ಮಾತ್ರ ಏರಿಕೆ ಕಂಡು ಬರುತ್ತಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಕಳವಳ ಸೂಚಿಸಿತು.

ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಸೋಂಕು ನಿಯಂತ್ರಣ ಕಾರ್ಯಕ್ಕೆ ನೆರವಾಗಲು ಉನ್ನತ ಮಟ್ಟದ ತಂಡಗಳನ್ನು ಉತ್ತರಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೆ ರವಿವಾರ ಕೇಂದ್ರ ಸರಕಾರ ರವಾನಿಸಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನ, ಗುಜರಾತ್, ಹರ್ಯಾಣ ಮತ್ತು ಛತ್ತೀಸ್‌ಗಢಕ್ಕೂ ಇದೇ ರೀತಿಯ ತಂಡಗಳನ್ನು ರವಾನಿಸಿತ್ತು.

ಸರಣಿ ಹಬ್ಬಗಳ ಸಂಭ್ರಮದಲ್ಲಿ ಜನತೆ ಸುರಕ್ಷಿತ ಅಂತರದ ನಿಯಮ ಮರೆತಿರುವುದು ಕೊರೋನ ಸೋಂಕು ಹೆಚ್ಚಲು ಒಂದು ಕಾರಣವಾಗಿದೆ. ಸೋಮವಾರದ ಬೆಳಿಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 44,059 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 91 ಲಕ್ಷದ ಗಡಿ ದಾಟಿದೆ. ಚೇತರಿಕೆ ಪ್ರಮಾಣ 85, 62,641ಕ್ಕೇರಿದ್ದು ಸತತ 13ನೇ ವಾರ ಸಕ್ರಿಯ ಪ್ರಕರಣ 5 ಲಕ್ಷಕ್ಕಿಂತ ಕಡಿಮೆಯಿದ್ದು ಇದು ಒಟ್ಟು ಪ್ರಕರಣಗಳ 4.85% ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News