ಪ್ರಸಕ್ತ ವರ್ಷ 8ರವರೆಗೆ ತರಗತಿ ಆರಂಭಿಸುವ ಯೋಚನೆ ಇಲ್ಲ: ಸಚಿವ ಸುರೇಶ್ ಕುಮಾರ್

Update: 2020-11-23 12:07 GMT

ಬೆಂಗಳೂರು, ನ. 23: ಮಾರಕ ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಡಿಸೆಂಬರ್ ಅಂತ್ಯವರೆಗೆ ಆರಂಭ ಮಾಡದಿರಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ.

ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ 2020-21ನೇ ಶೈಕ್ಷಣಕ ಸಾಲಿನಲ್ಲಿ ಶಾಲೆಗಳನ್ನು ಪ್ರಾರಂಂಭಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಸಭೆಯಲ್ಲಿ ಶಿಕ್ಷಣ ತಜ್ಞರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಸಿದ್ದು, ಡಿಸೆಂಬರ್ ಅಂತ್ಯದವರೆಗೆ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ತೆರೆಯದಿರಲು ತೀರ್ಮಾನ ಮಾಡಲಾಗಿದೆ' ಎಂದು ಹೇಳಿದರು.

‘ಡಿಸೆಂಬರ್ ತಿಂಗಳ ಕೊನೆಯಲ್ಲಿ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಸನ್ನಿವೇಶದಲ್ಲಿ ಕೋವಿಡ್-19 ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಗೆ ತೊಂದರೆಯಾಗಬಹುದು. ಆದುದರಿಂದ ಒಮ್ಮತದಿಂದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ' ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

1ರಿಂದ 8ನೆ ತರಗತಿ ಆರಂಭಿಸುವ ಯೋಚನೆ ಇಲ್ಲ: ಡಿಸೆಂಬರ್ ವರೆಗೆ ರಾಜ್ಯದಲ್ಲಿ ಯಾವುದೇ ಶಾಲೆ-ಪದವಿಪೂರ್ವ ಕಾಲೇಜುಗಳನ್ನು ತೆರೆಯುವುದಿಲ್ಲ. ತಜ್ಞರ ಅಭಿಪ್ರಾಯವನ್ನು ಆಧರಿಸಿ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಡಾ.ಸುದರ್ಶನ್ ನೇತೃತ್ವದ 14 ಮಂದಿ ಹಿರಿಯ ತಜ್ಞರ ಸಲಹಾ ಸಮಿತಿ ಡಿಸೆಂಬರ್ ನಲ್ಲಿ  ಚಳಿ ಇರಲಿದ್ದು, ಸೋಂಕು ವ್ಯಾಪಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಲೆ ಆರಂಭ ಮಾಡುವುದು ಬೇಡ ಎಂದು ಸಲಹೆ ನೀಡಿದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಜೀವ ಉಳಿಸುವುದು ಮುಖ್ಯ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ತಜ್ಞರ ಸಮಿತಿ ಡಿಸೆಂಬರ್ ಮೂರನೆ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಆ ಸಂದರ್ಭದಲ್ಲಿನ ಪರಿಸ್ಥಿತಿ ಅವಲೋಕನ ನಡೆಸಲಿದ್ದು, ಆ ಬಳಿಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜು  ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದ ಅವರು, ಶಾಲೆಗಳನ್ನು ಆರಂಭಿಸದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ‘ಬಾಲ ಕಾರ್ಮಿಕರ’ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೆಲವು ತಾಲೂಕುಗಳಲ್ಲಿ ‘ಬಾಲ್ಯ ವಿವಾಹ'ವೂ ಹೆಚ್ಚು ನಡೆಯುತ್ತಿದೆ. ಈ ಸಾಮಾಜಿಕ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದರು.

ಪ್ರಸಕ್ತ ವರ್ಷ ಒಂದರಿಂದ ಎಂಟನೆ ತರಗತಿಯವರೆಗಿನ ಶಾಲೆಯನ್ನು ಆರಂಭಿಸುವ ಬಗ್ಗೆ ಯೋಚನೆಯೇ ಮಾಡಿಲ್ಲ. ಆದರೆ, 9 ಮತ್ತು 10ನೆ ತರಗತಿ ಹಾಗೂ ಪದವಿಪೂರ್ವ ಕಾಲೇಜು ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಎಸೆಸೆಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಲಾಗುತ್ತಿದೆ ಎಂದರು.

ಕೋವಿಡ್-19 ಪ್ರಕರಣ ಸಂಖ್ಯೆ ಕಡಿಮೆ ಇರುವ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಆದರೆ, ಆರೋಗ್ಯ ಇಲಾಖೆ ಹೀಗೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ನೀಡಿದ್ದು, ಡಿಸೆಂಬರ್ ಅಂತ್ಯದವರೆಗೆ ಶಾಲೆಗಳನ್ನು ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದರು.

ಶೀಘ್ರವೇ ದಿನಾಂಕ ಪ್ರಕಟ: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೆ ಪ್ರಕಟಿಸಲಾಗುವುದು. ಆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ಹಾಗೂ ಪರೀಕ್ಷೆಗೆ ಸಿದ್ದಗೊಳಿಸಲಾಗುವುದು ಎಂದ ಅವರು, ಡಿಸೆಂಬರ್ ಅಂತ್ಯದ ವೇಳೆಗೆ ಚಂದನ ವಾಹಿನಿಯ 'ಸಂವೇದಿ' ಮೂಲಕ ಎಸೆಸೆಲ್ಸಿ ಪಠ್ಯ ಪೂರ್ಣಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 9,59,566 ಮಂದಿ ಎಸೆಸೆಲ್ಸಿ ಹಾಗೂ 5,70,126 ಪಿಯುಸಿ ವಿದ್ಯಾರ್ಥಿಗಳಿದ್ದಾರೆ. ‘ವಿದ್ಯಾಗಮ’ ಸದ್ಯಕ್ಕೆ ಆರಂಭಿಸುವುದಿಲ್ಲ. ಆದರೆ, ಖಾಸಗಿ ಟಿವಿ ವಾಹಿನಿಗಳ ಮೂಲಕ ಮಕ್ಕಳಿಗೆ ಉಚಿತ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದ ಅವರು, ಖಾಸಗಿ ಶಾಲೆಗಳು ಎರಡನೆ ಹಂತದ ಶುಲ್ಕ ವಸೂಲಿ ಮಾಡುವ ಸಂಬಂಧ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಶಾಲೆ ಆರಂಭ ಸೂಕ್ತವಲ್ಲ: ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸುವುದು ಸೂಕ್ತವಲ್ಲ. ಡಿಸೆಂಬರ್ ನ ಚಳಿಗಾಲ ಸೋಂಕು ಹರಡಲು ಅನುಕೂಲ ಮಾಡಿಕೊಡಬಹುದು. ಕೊರೋನ ಎರಡನೇ ಅಲೆಯೂ ಬರಲಿದೆ ಎಂಬ ಸುದ್ದಿಯೂ ಇರುವುದರಿಂದ ಮುಂದಾಲೋಚನೆ ಮಾಡಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ಡಿಸೆಂಬರ್ ತಿಂಗಳ ಕೊನೆಯಲ್ಲಿ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು ಆರಂಭಿಸುವ ಸಂಬಂಧ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಕೋವಿಡ್-19 ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ತಜ್ಞರ ಶಿಫಾರಸ್ಸು ಆಧರಿಸಿ ಡಿಸೆಂಬರ್ ಅಂತ್ಯದವರೆಗೆ ಶಾಲೆಗಳನ್ನು ಆರಂಭಿಸದಿರಲು ನಿರ್ಧರಿಸಲಾಗಿದೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News