ರೋಷನ್ ಬೇಗ್ ಮನೆ ಮೇಲಿನ ಸಿಬಿಐ ದಾಳಿ ಪ್ರಕರಣ: ಹಲವು ದಾಖಲೆಗಳ ವಶ

Update: 2020-11-23 17:27 GMT

ಬೆಂಗಳೂರು, ನ.23: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಸೋಮವಾರ ಬೆಳಗ್ಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಸೋಮವಾರ ಬೆಳಗ್ಗೆ 7.45ಕ್ಕೆ 13 ಜನ ಸಿಬಿಐ ಅಧಿಕಾರಿಗಳ ತಂಡ ಬೆಂಗಳೂರಿನ ಪುಲಕೇಶಿ ನಗರದ ಕೋಲ್ಸ್ ಪಾರ್ಕ್‍ನಲ್ಲಿರುವ ರೋಷನ್ ಬೇಗ್ ಅವರ ಎರಡು ನಿವಾಸಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಸತತ 8 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಚರಾಸ್ತಿ ಮತ್ತು ಸ್ಥಿರಾಸ್ತಿಯ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೋಷನ್ ಬೇಗ್ ಅವರ ಪತ್ನಿ ಕೂಡ ಮನೆಯಲ್ಲಿಯೇ ಇದ್ದರು.

ದಾಳಿ ವೇಳೆ ಆಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ರೋಷನ್ ಬೇಗ್ ಅವರನ್ನು ರವಿವಾರ ಬೆಳಗ್ಗೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದ ಸಿಬಿಐ ಅಧಿಕಾರಿಗಳು ವಿಚಾರಣೆ ಬಳಿಕ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ರೋಷನ್ ಬೇಗ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು.    

ಬೇಗ್ ವಿರುದ್ಧ ಖಾನ್ ಆರೋಪ: ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಬಳಿಕ ಅಜ್ಞಾತ ಸ್ಥಳದಿಂದ ಆಡಿಯೋ ಮಾಡಿ ಹರಿಯಬಿಟ್ಟು, ತನ್ನ ಬಳಿಯಿಂದ ರೋಷನ್ ಬೇಗ್ 400 ಕೋಟಿ ರೂ.ಪಡೆದು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ಬೇಗ್ ತಳ್ಳಿ ಹಾಕಿದ್ದರು.

ಮನ್ಸೂರ್ ಖಾನ್ ತನ್ನ ಆಡಿಯೋದಲ್ಲಿ ಬೇಗ್ ಮಾತ್ರವಲ್ಲದೇ ಹಲವು ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೂ ಹಣ ನೀಡಿದ್ದಾಗಿ ಉಲ್ಲೇಖಿಸಿದ್ದರು.

ಬೇಗ್‍ಗೆ ನೋಟಿಸ್ ನೀಡಿದ್ದ ಎಸ್‍ಐಟಿ: ಐಎಂಎ ವಂಚನೆ ಕೇಸ್ ಬಗ್ಗೆ ಮೊದಲು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ(ಎಸ್‍ಐಟಿ), ವಿಚಾರಣೆಗೆ ಹಾಜರಾಗುವಂತೆ ಬೇಗ್‍ಗೆ ನೋಟಿಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ವರ್ಷ ಜು.19ರಂದು ಎಸ್‍ಐಟಿಯು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News