ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆದಾರರಿಂದ ಧರಣಿ

Update: 2020-11-23 12:13 GMT

ಬೆಂಗಳೂರು, ನ.23: ಬಿಬಿಎಂಪಿ ಕಳೆದ 25 ತಿಂಗಳಿನಿಂದ ಗುತ್ತಿಗೆದಾರರಿಗೆ ಉಳಿಸಿಕೊಂಡಿರುವ ಬಾಕಿ ಬಿಲ್ ಅನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಾರ್ಯನಿರತ ಗುತ್ತಿಗೆದಾರ ಸಂಘದ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿ ಅವರಣದಲ್ಲಿ ಸೋಮವಾರ ಧರಣಿ ನಡೆಸಿದರು.

ಈ ವೇಳೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಮಾತನಾಡಿ, ಕಾಮಗಾರಿ ಪೂರ್ಣಗೊಂಡು 25 ತಿಂಗಳಾದರೂ ಬಿಬಿಎಂಪಿ ವತಿಯಿಂದ ಸಕಾಲಕ್ಕೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಹಣ ತಂದು, ಬಹುತೇಕ ಗುತ್ತಿಗೆದಾರರು ಕಾಮಗಾರಿಗಳನ್ನು ಮಾಡಿರುತ್ತಾರೆ. ಆದ್ದರಿಂದ ಕೂಡಲೇ ಬಾಕಿ ಹಣ ಪಾವತಿಸುವಂತೆ ಅವರು ಒತ್ತಾಯಿಸಿದರು.

ಬಿಬಿಎಂಪಿಯಲ್ಲಿ ನಿಧಾನಗತಿಯಲ್ಲಿ ಬಿಲ್ ಪಾವತಿ ಮಾಡುವುದರಿಂದ ಬಂದ ಹಣವೆಲ್ಲ ಅಸಲು, ಬಡ್ಡಿಗೆ ಸಮವಾಗುತ್ತದೆ. ಗುತ್ತಿಗೆದಾರರನ್ನು ನಂಬಿಕೊಂಡಿರುವ ಕುಟುಂಬ ವರ್ಗ ಮತ್ತು ಸಾವಿರಾರು ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಲಂಚ ನೀಡಿದವರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕಾಮಗಾರಿ ಪೂರ್ಣಗೊಂಡ ಆರು ತಿಂಗಳ ಅವಧಿಯಲ್ಲಿ ಬಿಲ್ಲು ಪಾವತಿಯಾಗಬೇಕು ಮತ್ತು ಕಳೆದ 25 ತಿಂಗಳ ಗುತ್ತಿಗೆದಾರರ ಬಿಲ್‍ಗಳನ್ನು ತತಕ್ಷಣ ಬಿಡುಗಡೆ ಮಾಡಬೇಕೆಂದು ಆಯುಕ್ತರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು

ಪ್ರತಿಭಟನೆಯಲ್ಲಿ ಗುತ್ತಿಗೆದಾರ ಸಂಘದ ಸದಸ್ಯರಾದ ಎಂ.ದೇವರಾಜ್, ವೆಂಕಟೇಶ್, ರವಿಕುಮಾರ್, ಶಿವಣ್ಣ, ಟಿ.ವೆಂಕಟೇಶ್, ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News