ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ: ಸಿಎಂ ಯಡಿಯೂರಪ್ಪ

Update: 2020-11-23 14:03 GMT

ಬೆಂಗಳೂರು, ನ. 23: ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ. ವಿಶ್ವದ ಜೀವವೈವಿಧ್ಯ ತಾಣಗಳು ಎಂದು ಹೆಸರಾಗಿರುವ ಪಶ್ಚಿಮಘಟ್ಟಗಳ ಬಹುಭಾಗ ಕರ್ನಾಟಕ ರಾಜ್ಯದಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಂಟ್ ಸಭಾಂಗಣದಲ್ಲಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ 2017, 2018 ಹಾಗೂ 2019ನೇ ಸಾಲಿನ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಿಎಂ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಪೂರ್ಣಚಂದ್ರ ತೇಜಸ್ವಿ ಅವರು ಹೇಳಿರುವಂತೆ ಇಡೀ ಜಗತ್ತು ಒಂದಕ್ಕೊಂದು ಬೆಸೆದುಕೊಂಡು ಸಮತೋಲನದಲ್ಲಿ ನಿಂತಿರುವ ಬಲೆ. ಈ ಬಲೆಯಲ್ಲಿ ಮುಖ್ಯವಾದ ಭಾಗ ಅರಣ್ಯ ಮತ್ತು ವನ್ಯಜೀವಿಗಳು. ಇವುಗಳ ಉಳಿವಿನಲ್ಲಿ ಮನುಕುಲದ ಅಸ್ತಿತ್ವ ಅಡಗಿದೆ ಎಂದು ಹೇಳಿದರು.

ಈ ಅರಣ್ಯ ಜೀವ ಜಲದ ಆಗರಗಳಾಗಿದ್ದು, ನದಿಗಳ ಉಗಮ ಸ್ಥಾನವಾಗಿದೆ. ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂಪನ್ಮೂಲವನ್ನು ರಕ್ಷಿಸಲು ಕರ್ನಾಟಕ ರಾಜ್ಯದ ಶೇ.22ರಷ್ಟು ಬಹುಭಾಗವನ್ನು ಮೀಸಲಿರಿಸಲಾಗಿದೆ. ಇವುಗಳಲ್ಲಿ ರಕ್ಷಿತ ಅರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳಿದ್ದು, ನಮ್ಮ ರಾಜ್ಯ ವನ್ಯಜೀವಿ ಸಂಪತ್ತಿನಲ್ಲಿಯೂ ಅಗ್ರಸ್ಥಾನದಲ್ಲಿದೆ. ನಮ್ಮ ರಾಜ್ಯ ಶೇ.10ರಷ್ಟು ಹುಲಿ ಮತ್ತು ಶೇ.25ರಷ್ಟು ಆನೆಗಳ ತಾಣವಾಗಿದೆ. ಆನೆಗಳ ಸಂಖ್ಯೆಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದ್ದು 524 ಹುಲಿಗಳನ್ನು ಹೊಂದಿದ್ದು, ದೇಶದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸುವ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ ಎಂದು ಯಡಿಯೂರಪ್ಪ ಹೇಳಿದರು.

ಹೆಚ್ಚುತ್ತಿರುವ ಜನಸಂಖ್ಯೆ, ಜನರ ಜೀವನ ಶೈಲಿ, ನಗರೀಕರಣ ಇತ್ಯಾದಿಗಳಿಂದ ಅರಣ್ಯ ಮತ್ತು ವನ್ಯಜೀವಿಗಳ ಅಸ್ತಿತ್ವಕ್ಕೆ ಹೆಚ್ಚು ಒತ್ತಡ ಬೀರುತ್ತಿದೆ. ಇಂತಹ ಸನ್ನೀವೇಶದಲ್ಲಿ ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಮಾತನಾಡಿ, ಇಡೀ ದೇಶದಲ್ಲಿ ಬೇರೆ ಬೇರೆ ರಾಜ್ಯಗಳು ಅರಣ್ಯ ಇಲಾಖೆಯನ್ನು ಮಾದರಿಯನ್ನಾಗಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡುತ್ತಿವೆ. ಅರಣ್ಯ ಉಳಿಯುವುದಕ್ಕೆ ಮುಂಚೂಣಿಯಲ್ಲಿರುವ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. 

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ದವೆ, ಅರಣ್ಯ ಪಡೆಯ ಮುಖ್ಯಸ್ಥ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹಾಗೂ ಸಿಎಂ ಪದಕ ಪಡೆದ ಅರಣ್ಯ ಇಲಾಖೆಯ 75 ಸಿಬ್ಬಂದಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News