ಒಂದೇ ನೋಂದಣಿ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ಬಸ್‍ಗಳ ವಶ

Update: 2020-11-23 14:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.23: ಒಂದೇ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅಂತರಾಜ್ಯ ಮಟ್ಟದಲ್ಲಿ ಸಂಚರಿಸುತ್ತಿದ್ದ ಬಸ್‍ಗಳನ್ನು ಹಾಗೂ ತೆರಿಗೆ ಪಾವತಿಸದೆ ನಗರದ ಹೊರವಲಯದಿಂದ ಸಂಚರಿಸುತ್ತಿದ್ದ ಇನ್ನೊಂದು ಬಸ್ಸನ್ನು ವಶಪಡಿಸಿಕೊಂಡು 41 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.

ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಅವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಾಚರಣೆಯನ್ನು ನಡೆಸಿದ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಮೋಟಾರು ವಾಹನ ನಿರೀಕ್ಷಕರಾದ ಎಂ.ಎನ್ ಸುಧಾಕರ್, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಹೆಚ್ ರಾಜಣ್ಣ, ಜಿ.ವಿ.ಕೃಷ್ಣಾನಂದ ಹಾಗೂ ಎಂ.ಶಿವಪ್ರಸಾದ್ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ನ.18 ರಂದು ಆರ್.ಜೆ 19 ಪಿಸಿ 3131 ಸ್ಲೀಪರ್ ಬಸ್ಸನ್ನು ದಾಬಸ್ ಪೇಟೆ–ನೆಲಮಂಗಲ ಮಧ್ಯೆ ದೇವನಾರಾಯಣ ಡಾಬಾ ಬಳಿ ನಿಲ್ಲಿಸಲಾಗಿತ್ತು. ಸದರಿ ವಾಹನಕ್ಕೆ ಈಗಾಗಲೇ ದಿನಾಂಕ ಅ.31, 2020ಕ್ಕೆ ಅಂತ್ಯವಾಗುವಂತೆ ರಹದಾರಿ ಮತ್ತು ತೆರಿಗೆ ಪಾವತಿಸಲಾಗಿತ್ತು. ಆದರೆ ಅ.31.2020ಕ್ಕೆ ಅಂತ್ಯವಾದ ತ್ರೈಮಾಸಿಕದ ತೆರಿಗೆಯಲ್ಲಿ ಕಡಿಮೆ ಮಾಡಲಾಗಿದ್ದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ವ್ಯತ್ಯಾಸ ತೆರಿಗೆಯನ್ನು ಭರಿಸಬೇಕಾಗಿರುತ್ತದೆ.

ಅಲ್ಲದೆ, ನ.1 ರಹದಾರಿ ಮತ್ತು ಆಥರೈಸೇಷನ್ ಪಡೆದು ಅನ್ವಯವಾಗುವ ತೆರಿಗೆಯನ್ನು ಪಾವತಿಸದೇ ಜೋಧಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಣೆ ಮಾಡಲಾಗುತ್ತಿತ್ತು. ರಹದಾರಿ ಮತ್ತು ತೆರಿಗೆ ಇಲ್ಲದ ಕಾರಣ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪ್ರಯಾಣಿಕರನ್ನು ನೆಲಮಂಗಲ ಹೊರವಲಯದಿಂದ ಬೇರೊಂದು ವಾಹನದಲ್ಲಿ ಸಾಗಣೆ ಮಾಡಿ, ನಂತರ ಸಂಜೆ ಬೆಂಗಳೂರಿನಿಂದ ಬಸ್‍ನಿಂದ ಸ್ಥಳಕ್ಕೆ ಕಾಯ್ದಿರಿಸಲಾದ ಪ್ರಯಾಣಿಕರನ್ನು ಅನ್ಯ ವಾಹನಗಳಲ್ಲಿ ಸಾಗಣೆ ಮಾಡಿ ನಂತರ ಜೋಧಪುರಕ್ಕೆ ಪ್ರಯಾಣ ಬೆಳೆಸಲು ಉದ್ದೇಶಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಾಹನವನ್ನು ವಶಕ್ಕೆ ಪಡೆದು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಮುಟ್ಟುಗೋಲು ಹಾಕಿ ತನಿಖಾ ವರದಿಯನ್ನು ನೀಡಲಾಗಿದೆ ಎಂದು ಹೇಳಿದರು.

ಒಂದೇ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನಂದ್ ಟ್ರಾನ್ಸಿಂಕ್ ವತಿಯಿಂದ ಸುಮಾರು 4 ಬಸ್ಸುಗಳು ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿದ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಹೆಚ್. ರಾಜಣ್ಣ, ಎಂ.ಎನ್ ಸುಧಾಕರ್, ಹಿಮೋವಾನಿ, ಜಿ.ಪಿ ಕೃಷ್ಣಾನಂದ ಮತ್ತು ಎಂ.ಶಿವಪ್ರಸಾದ್ ಅವರು ತುರ್ತು ಸಭೆ ನಡೆಸಿ ತಂಡಗಳ ರಚನೆ ಮಾಡಿ ಬೆಂಗಳೂರು ನಗರ ಹಾಗೂ ಹೊಸೂರು ರಸ್ತೆ, ಅತ್ತಿಬೆಲೆಗಳಲ್ಲಿ ಕಾವಲು ಕಾಯ್ದು ರಾತ್ರಿ 10 ಗಂಟೆಗೆ ಎನ್‍ಎಲ್ 01 ಬಿ 1794 (ಎರಡನೇ ವಾಹನ)ವನ್ನು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗಿ, ಒಂದೇ ನೋಂದಣಿ ಸಂಖ್ಯೆಯಲ್ಲಿ ಹಲವು ವಾಹನಗಳು ಓಡಾಡುತ್ತಿರುವುದಾಗಿ ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಮೇಲ್ನೋಟಕ್ಕೆ ವಾಹನಕ್ಕೆ ಬೇರೊಂದು (ನಕಲು) ನೊಂದಣಿ ಫಲಕ ಅಳವಡಿಸಿ ಸೂಕ್ತ ದಾಖಲೆಗಳಿಲ್ಲದೆ ನೋಂದಣಿ ದಿನಾಂಕದಿಂದ ಕರ್ನಾಟಕ ರಾಜ್ಯದ ರಸ್ತೆ ತೆರಿಗೆ ಅಂದಾಜು 41 ಲಕ್ಷ ರೂ.ಗಳಷ್ಟು ನಷ್ಟವನ್ನುಂಟು ಮಾಡಲಾಗಿದೆ. ಈ ನಷ್ಟದ ತೆರಿಗೆಯನ್ನು ವಸೂಲು ಮಾಡಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News