ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಕನ್ನಡದ ಲೇಖಕರು ಮುಂಚೂಣಿ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

Update: 2020-11-23 16:04 GMT

ಬೆಂಗಳೂರು, ನ.23: ಆಧುನಿಕ ಮತ್ತು ಪ್ರಾಚೀನ ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಕನ್ನಡದ ಲೇಖಕರು ಮುಂಚೂಣಿಯಲ್ಲಿದ್ದಾರೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದ್ದಾರೆ.

ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ವರ್ಷದ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗಗಳಿಂದಲೂ ಅತ್ಯುತ್ತಮ ವಿದ್ವಾಂಸರು, ಸಂಶೋಧಕರು ಬಂದಿದ್ದಾರೆ. ಕನ್ನಡ ಸಾಹಿತ್ಯ ತನ್ನ ಸೀಮೆಯನ್ನು ವಿಸ್ತರಿಸಿಕೊಂಡು ಸಾಗಿದೆ ಎಂದರು.

ಕಥೆ, ಕಾದಂಬರಿ, ಲಲಿತಾ ಪ್ರಬಂಧ, ವೈಚಾರಿಕ ಬರಹ, ಮಹಾಕಾವ್ಯ ಕಾವ್ಯ, ಖಂಡ ಕಾವ್ಯ, ನಾಟಕ, ಆತ್ಮಚರಿತ್ರೆ, ಜೀವನಗಾಥೆ, ವಿಜ್ಞಾನ ಸಾಹಿತ್ಯ ಹೀಗೆ ಅನೇಕ ಪ್ರಕಾರಗಳಲ್ಲಿ ಉನ್ನತ ಮಟ್ಟದ ಸಾಹಿತ್ಯ ರಚಿಸಿ ನಮ್ಮ ಸಾಹಿತಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇಂದು ಪ್ರಶಸ್ತಿ ಸ್ವೀಕರಿಸುತ್ತಿರುವ ಐವರು ಕೂಡ ರಾಜ್ಯದ ಸಾಹಿತ್ಯ ಪರಂಪರೆಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್, ಕನ್ನಡದ ಕೆಲಸ ಮಾಡಲು ಅಕಾಡೆಮಿಯಲ್ಲಿ ಹಣದ ಕೊರತೆಯಿಲ್ಲ. ಸೂಕ್ತ ಯೋಜನೆ, ಕ್ರಿಯಾಶೀಲತೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬದ್ಥತೆ ಇರುವುದು ಮುಖ್ಯ ಎಂದು ಹೇಳಿದರು.

ಸಾಹಿತಿಗಳಾದ ಪ್ರೊ. ಕೆ.ಜಿ. ನಾಗರಾಜಪ್ಪ, ಬಾಬು ಕೃಷ್ಣಮೂರ್ತಿ, ಉಷಾ ಪಿ. ರೈ, ಡಾ. ವೀರಣ್ಣ ರಾಜೂರ, ಪ್ರೊ. ಲಕ್ಷ್ಮಣ ತೆಲಗಾವಿ ಅವರು 2019ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಅಕಾಡೆಮಿಯ ನಿರ್ದೇಶಕ ಎಸ್. ರಂಗಪ್ಪ ಅವರು ಅನಿಕೇತನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News