ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು : ಹದಿನೇಳನೆ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Update: 2020-11-24 10:01 GMT

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಆಡಳಿತ ಮಂಡಳಿ ಸರಕಾರದ ಆದೇಶ ಉಲ್ಲಂಘನೆ ಖಂಡಿಸಿ ಕಾರ್ಮಿಕರ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಟಿಕೆಎಂಇಯು ಸಂಘ ಕೆಲಸ ನಿರ್ವಹಿಸಲು ನಿರ್ಧರಿಸಿದ್ದರೂ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯ ಒಳಗೆ ಕಾರ್ಮಿಕರನ್ನು ಪ್ರವೇಶ ಮಾಡಲು ಅನುಮತಿ ನೀಡಲು ನಿರಾಕರಿಸುತ್ತಿದೆ ಎಂದು  ಆರೋಪಿಸಲಾಗಿದೆ.

ರಾಜ್ಯ ಸರಕಾರ ಲಾಕ್ ಔಟ್ ನಿಷೇಧಿಸಿ ಐದು ದಿನ ಕಳೆದರೂ, ಕರ್ತವ್ಯಕ್ಕೆ ಹಾಜರಾಗಲು ನೌಕರರು ಕಂಪೆನಿ ಬಳಿ ಬಂದಾಗ ಒಳಗೆ ಪ್ರವೇಶಿಸಲು ಆಡಳಿತ ವರ್ಗ ಮುಖ್ಯದ್ವಾರದಲ್ಲಿಯೇ ತಡೆದು ಒಳ ಪ್ರವೇಶವನ್ನು ನಿರಾಕರಿಸುತ್ತಿದೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಚೆಕ್ಕೆರೆ ದೂರಿದ್ದಾರೆ.

ಕಾರ್ಮಿಕರ ಹೋರಾಟಕ್ಕೆ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಬೆಂಬಲ ಸೂಚಿಸಿದ್ದು, ಕಾರ್ಖಾನೆ ಆಡಳಿತ ಮಂಡಳಿ  ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಮತ್ತು ಅನಗತ್ಯ ಒತ್ತಡ ಹಾಗೂ ಅಮಾನವೀಯ ಕಿರುಕುಳವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಬಿಡದಿ ಘಟಕದ ರಾಘವೇಂದ್ರ ಮತ್ತು ಡೆನ್ಸ್ಕೋ ಕಿರ್ಲೋಸ್ಕರ್ ಅಧ್ಯಕ್ಷ ತಿರುಮಲಾಚಾರ್ ಸೇರಿದಂತೆ ರೈತ ಕಾರ್ಮಿಕ ಸಂಘಟನೆಯ ಎಚ್.ಪಿ. ಶಿವಪ್ರಕಾಶ್ ಮತ್ತು ಎಐಯುಟಿಯುಸಿ ಜಿ. ಹನುಮೇಶ್ ಬೆಂಬಲ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News