ಕೆಎಎಸ್ ಅಧಿಕಾರಿ ಡಾ.ಸುಧಾಗೆ ಮತ್ತೆ ಎಸಿಬಿ ಶಾಕ್: ಸಂಬಂಧಿಕರು, ಆಪ್ತರ ಮನೆ ಮೇಲೆ ದಾಳಿ

Update: 2020-11-24 13:04 GMT

ಬೆಂಗಳೂರು, ನ.24: ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಲಂಚ ಪಡೆದಿದ್ದರು ಎಂಬ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ಮನೆ ಮೇಲೆ ನ.7ರಂದು ಎಸಿಬಿ ದಾಳಿ ನಡೆಸಿತ್ತು. ಮಂಗಳವಾರ ಅವರ ಆಪ್ತರು ಮತ್ತು ಸಂಬಂಧಿಕರ ಮನೆಗಳ ಮೇಲೆ ಬೆಂಗಳೂರಿನ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಕೆಲ ದಿನಗಳ ಹಿಂದೆ ಸುಧಾ ಅವರ ಮನೆ, ಅವರ ಆಪ್ತೆ ರೇಣುಕಾ ಮನೆ ಸೇರಿ 6 ಕಡೆಗಳಲ್ಲಿ ದಾಳಿ ನಡೆಸಿದ್ದ ವೇಳೆ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ರಗಳು ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ಎಸಿಬಿಯಿಂದ ಮಂಗಳವಾರ ಮತ್ತೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ನಗರದಲ್ಲಿ ಒಟ್ಟು ಆರು ಕಡೆ ದಾಳಿ ನಡೆಸಲಾಗಿದ್ದು, ಭೀಮನಕುಪ್ಪೆಯಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಗುರುವಾರ ಬೆಳಗ್ಗೆ 6.30ಕ್ಕೆ ರಿಯಲ್ ಎಸ್ಟೇಟ್ ಏಜೆಂಟ್ ಮಹೇಶ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಭೀಮನಕುಪ್ಪೆಯ ನಿವಾಸದಲ್ಲಿ ಇರುವ ಮಹೇಶ್ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದೇ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಮನೆ ಮೇಲೂ ದಾಳಿ ನಡೆಸಲಾಗಿದೆ. ಭೀಮನಕುಪ್ಪೆಯಲ್ಲಿ ಮೂರು ಕಡೆ, ಎನ್ ಜಿಎಫ್ ಲೇಔಟ್, ರಾಮಸಂದ್ರ, ಕೆಕೆ ಲೇಔಟ್‍ನಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸೊರಬದಲ್ಲಿ ತಹಶಿಲ್ದಾರ್ ಆಗಿದ್ದ ಡಾ. ಸುಧಾ ಶಿವಮೊಗ್ಗದಲ್ಲೇ ಬೇರೆ ಬೇರೆ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎಯಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂ ಸ್ವಾಧೀನಾಧಿಕಾರಿಯಾಗಿದ್ದರು. ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ.

ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News