ಇಂದು ಭಾರತ -ಆಸ್ಟ್ರೇಲಿಯ ಮೊದಲ ಏಕದಿನ ಪಂದ್ಯ

Update: 2020-11-26 18:51 GMT

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಶುಕ್ರವಾರ ನಡೆಯಲಿದೆ.

ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಉಪನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಮತ್ತೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸುತ್ತಿದೆ. ಗಾಯಗೊಂಡ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಅಗ್ರಸರದಿಯ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ.ಅವರ ಅನುಪಸ್ಥಿತಿಯಿಂದಾಗಿ ನಾಯಕ ವಿರಾಟ್ ಕೊಹ್ಲಿಹೆಚ್ಚಿನ ಒತ್ತಡವನ್ನು ಎದುರಿಸುವಂತಾಗಿದೆ. ಕಳೆದ ಮಾರ್ಚ್‌ನಲ್ಲಿ ಕೊನೆಗೊಂಡ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಕೊಹ್ಲಿ ಪಡೆ ಮೊದಲ ಬಾರಿ ಕ್ರೀಡಾಂಗಣಕ್ಕೆ ಇಳಿಯುತ್ತಿದೆ. 1992ರ ವಿಶ್ವಕಪ್‌ನಲ್ಲಿ ನೀಲಿ ಜರ್ಸಿಯಲ್ಲಿ ಭಾರತ ಆಡಿತ್ತು. ಅದೇ ಬಣ್ಣದ ಜರ್ಸಿಯಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಆದರೆ ಆ ಬಾರಿ ಭಾರತ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತ್ತು. 9 ತಂಡಗಳ ಪೈಕಿ 7ನೇ ಸ್ಥಾನ ಪಡೆದಿತ್ತು.

ಲೋಕೇಶ್ ರಾಹುಲ್ ಅವರು ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯನ್ನು ತುಂಬಲು ನೋಡುತ್ತಿದ್ದಾರೆ. ಶಿಖರ್ ಧವನ್ ಜೊತೆ ಯುವ ಆಟಗಾರ ಶುಭ್‌ಮನ್ ಗಿಲ್ ಅಥವಾ ಸ್ವಲ್ಪಹೆಚ್ಚು ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಆದರೆ ಭಾರತದ ಬ್ಯಾಟ್ಸ್ ಮನ್‌ಗೆ ಮಿಚೆಲ್ ಸ್ಟಾರ್ಕ್ ಅಥವಾ ಪ್ಯಾಟ್ ಕಮಿನ್ಸ್ ಅನ್ನು ಎದುರಿಸುವುದು ದೊಡ್ಡಸವಾಲಾಗಿದೆ.

‘ಕಿಂಗ್ ಕೊಹ್ಲಿ’ ಮತ್ತೆ ಉತ್ತಮ ಗುಣಮಟ್ಟದ ವೇಗದ ದಾಳಿಯನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಭಾರತದ ದಾಳಿಯನ್ನು ಜಸ್‌ಪ್ರೀತ್ ಬುಮ್ರಾ ಮತ್ತು ಮುಹಮ್ಮದ್ ಶಮಿ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಇವರಲ್ಲಿ ಒಬ್ಬರಿಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾದರೆ ಶಾರ್ದುಲ್ ಠಾಕೂರ್ ಮತ್ತು ನವದೀಪ್ ಸೈನಿ ಇವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

  ಕಲಾತ್ಮಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್‌ಗೆ ಈ ಸರಣಿಯು ಕಠಿಣ ಪರೀಕ್ಷೆಯಾಗಲಿದೆ. . ಆಸ್ಟ್ರೇಲಿಯದ ಮಧ್ಯಮ ಕ್ರಮಾಂಕದಲ್ಲಿ ವಿಶೇಷವಾಗಿ ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಅಲೆಕ್ಸ್ ಕ್ಯಾರಿಯವರಿಗೆ ಚಹಾಲ್ ಸವಾಲೊಡ್ಡಲಿದ್ದಾರೆ. ಭುವನೇಶ್ವರ್ ಕುಮಾರ್ ಅವರಂತಹ ಸ್ಥಿರ ಡೆತ್ ಬೌಲರ್ ಅನುಪಸ್ಥಿತಿಯಲ್ಲಿ ಬುಮ್ರಾಗೆ ಗರಿಷ್ಠ ಹೊರೆ ಬೀಳಲಿದೆ.

ತಂಡಗಳು

ಭಾರತ:   ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭ್‌ಮನ್ ಗಿಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್.

ಆಸ್ಟ್ರೇಲಿಯ:   ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಝಂಪ , ಜೋಶ್ ಹೇಝಲ್‌ವುಡ್‌ವುಡ್, ಸೀನ್ ಅಬಾಟ್, ಆ್ಯಸ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಮೊಯ್ಸಿಸ್ ಹೆನ್ರಿಕ್ಸ್, ಆ್ಯಂಡ್ರೊ ಟೈ, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್).

ಪಂದ್ಯದ ಸಮಯ: ಬೆಳಗ್ಗೆ 9:10ಕ್ಕೆ ಅರಂಭ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News