ಮಿಗ್-29ಕೆ ತರಬೇತು ವಿಮಾನ ಸಮುದ್ರಕ್ಕೆ ಪತನ, ಓರ್ವ ಪೈಲಟ್ ರಕ್ಷಣೆ

Update: 2020-11-27 17:11 GMT

ಹೊಸದಿಲ್ಲಿ, ನ. 27: ವಿಮಾನ ವಾಹಕ ಐಎನ್‌ಎಸ್ ವಿಕ್ರಮಾದಿತ್ಯದಿಂದ ಕಾರ್ಯಾಚರಿಸುತ್ತಿದ್ದ ಭಾರತೀಯ ನೌಕಾ ಪಡೆಯ ತರಬೇತಿ ವಿಮಾನ ಮಿಗ್-29ಕೆ ಅರೇಬಿ ಸಮುದ್ರದಲ್ಲಿ ಗುರುವಾರ ಸಂಜೆ ಅಪಘಾತಕ್ಕೀಡಾಗಿದೆ ಎಂದು ಭಾರತೀಯ ನೌಕಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

‘‘ಈ ಅಪಘಾತದಲ್ಲಿ ಓರ್ವ ಪೈಲಟ್‌ ನನ್ನು ಪತ್ತೆ ಹಚ್ಚಲಾಗಿದೆ. ಇನ್ನೋರ್ವ ಪೈಲಟ್‌ಗಾಗಿ ಗಸ್ತು ವಿಮಾನ ಹಾಗೂ ಹಡಗಿನ ಮೂಲಕ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ’’ ಎಂದು ಭಾರತೀಯ ನೌಕಾ ಪಡೆಯ ಹೇಳಿಕೆ ತಿಳಿಸಿದೆ.

ರಶ್ಯಾ ಮೂಲದ ಈ ಜೆಟ್, ವಿಮಾನ ವಾಹಕ ಐಎನ್‌ಎಸ್ ವಿಕ್ರಮಾದಿತ್ಯದಿಂದ ಸಂಚಾರ ಆರಂಭಿಸಿತ್ತು ಎಂದು ಮೂಲಗಳು ತಿಳಿಸಿವೆ. ಭಾರತೀಯ ನೌಕಾ ಪಡೆಯಲ್ಲಿ 40 ಮಿಗ್-29ಕೆ ವಿಮಾನಗಳು ಇವೆ. ಕೆಲವು ಜೆಟ್‌ಗಳು ವಿಮಾನ ವಾಹಕದಿಂದ ಕಾರ್ಯನಿರ್ವಹಿಸುತ್ತವೆ.

ಮಿಗ್-29ಕೆ ಯುದ್ಧ ವಿಮಾನ ಅಪಘಾತಕ್ಕೀಡಾಗುತ್ತಿರುವ ನಾಲ್ಕನೇ ಘಟನೆ ಇದಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಮಿಗ್-29ಕೆ ವಿಮಾನ ಎಂದಿನಂತೆ ಹಾರಾಟ ಆರಂಭಿಸಿ ಗೋವಾದಲ್ಲಿ ಪತನಗೊಂಡಿತ್ತು. ಆದರೆ, ಪೈಲೆಟ್ ಅಪಾಯದಿಂದ ಪಾರಾಗಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಗೋವಾ ನೌಕಾ ಪಡೆಯ ವಾಯು ನೆಲೆಯಿಂದ ಹಾರಾಟ ಆರಂಭಿಸಿದ ಎರಡು ಆಸನಗಳ ಮಿಗ್-29ಕೆ ವಿಮಾನ ಹಕ್ಕಿ ಬಡಿದ ಪರಿಣಾಮ ಅಪಘಾತಕ್ಕೀಡಾಗಿತ್ತು. ಆದರೆ, ಇಬ್ಬರೂ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದರು. 2018 ಜನವರಿಯಲ್ಲಿ ಗೋವಾದ ಐಎನ್‌ಎಸ್ ಹಂಸ ವಾಯು ನೆಲೆಯ ರನ್‌ವೇಯಲ್ಲಿ ಮಿಗ್-29 ಕೆ ಯುದ್ಧ ವಿಮಾನ ಜಾರಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಕೂಡಾ ಪೈಲೆಟ್ ಅಪಾಯ ಇಲ್ಲದೆ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News