ರೈತರ ಚಳವಳಿ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ

Update: 2020-11-28 04:12 GMT

ಹೊಸದಿಲ್ಲಿ, ನ.28: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಹಾಗೂ ಹರ್ಯಾಣ ರೈತರ ಹೋರಾಟಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರೈತರ ಬೆಂಬಲ ದೊರಕಿದ್ದು, ಮುಂದಿನ ಕೆಲ ದಿನಗಳಲ್ಲಿ ರೈತ ಮುಖಂಡರು ಹೋರಾಟಕ್ಕೆ ಧುಮುಕಲಿದ್ದಾರೆ. ಇದರಿಂದಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸ್ಪಷ್ಟ ಸೂಚನೆ ಸಿಕ್ಕಿದೆ.

ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲೂ ಶುಕ್ರವಾರ ಪ್ರತಿಭಟನೆ ಆರಂಭವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದಿಂದ ಆಗಮಿಸುವ ರೈತರು ರಾಜಧಾನಿ ಪ್ರವೇಶಿಸಲು ಯತ್ನಿಸುವ ಹಿನ್ನೆಲೆಯಲ್ಲಿ ಶನಿವಾರ ದಿಲ್ಲಿ- ಉತ್ತರ ಪ್ರದೇಶ ಅಂತರ್ ರಾಜ್ಯ ಗಡಿಯಲ್ಲಿ ಮತ್ತೆ ವಾತಾವರಣ ಕಾವೇರಲಿದೆ ಎಂದು ಅಂದಾಜಿಸಲಾಗಿದೆ.

ದಿಲ್ಲಿ-ಹರ್ಯಾಣ ಗಡಿಯ ಸೋನಿಪತ್ ಮತ್ತು ಝಜ್ಜಾರ್‌ನಲ್ಲಿ ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಪ್ರತಿಭಟನಾಕಾರರಿಗೆ ಶುಕ್ರವಾರ ಸಂಜೆ ಟಿಕ್ರಿ ಗಡಿಯ ಮೂಲಕ ರಾಜಧಾನಿ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ವಾಯವ್ಯ ದಿಲ್ಲಿಯ ಬುರಾರಿ ಪ್ರದೇಶದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಅವಕಾಶ ನೀಡಲಾಗಿದೆ.

ಕಳೆದ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಒಪ್ಪಿಗೆ ಪಡೆದ ಕೃಷಿಕರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ-2020, ಬೆಲೆ ಖಾತರಿ ಬಗ್ಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ- 2020 ಹಾಗೂ ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ-2020 ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ಹೊಸ ಕಾಯ್ದೆಗಳನ್ನು ರದ್ದುಪಡಿಸಬೇಕು ಹಾಗೂ ದೇಶದಲ್ಲಿ ಎಲ್ಲ ಕೃಷ್ಯುತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಒದಗಿಸಬೇಕು ಎನ್ನುವುದು ರೈತರ ಆಗ್ರಹ.

ಗ್ರಾಂಡ್ ಟ್ರಂಕ್ ರಸ್ತೆಯ ಸಿಂಘು ಗಡಿಯಲ್ಲಿ ರೈತರಿಂದ ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿಗಳನ್ನು ತಡರಾತ್ರಿವರೆಗೂ ತಡೆಯಲಾಯಿತು. ಹಲವು ರೈತರು ಕಾರುಗಳಲ್ಲಿ, ಬಸ್ಸುಗಳಲ್ಲಿ, ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ದಿಲ್ಲಿಯತ್ತ ರಾಜ್ಯದ ವಿವಿಧ ಹೆದ್ದಾರಿಗಳ ಮೂಲಕ ಆಗಮಿಸುತ್ತಿದ್ದಾರೆ ಎಂದು ಹರ್ಯಾಣ ಪೊಲೀಸರು ಮಾಹಿತಿ ನೀಡಿದ್ದಾರೆ. 

ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ಹಾಗೂ ರಸ್ತೆ ತಡೆಗಳನ್ನು ನಡೆಸಿದರು. ಶನಿವಾರದಿಂದ ರೈತರು ದಿಲ್ಲಿಗೆ ಜಾಥಾದಲ್ಲಿ ತೆರಳಬೇಕು ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಕರೆ ನೀಡಿದರು. ಟ್ರ್ಯಾಕ್ಟರ್ ಟ್ರಾಲಿಗಳ ಮೂಲಕ ರೈತರು ದಿಲ್ಲಿಗೆ ಆಗಮಿಸುವಂತೆ ಸೂಚಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ 1988ರಲ್ಲಿ ಐದು ಲಕ್ಷ ಮಂದಿ ದಿಲ್ಲಿಯಲ್ಲಿ ಏಳು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಅಂದಿನ ರಾಜೀವ್‌ ಗಾಂಧಿ ಸರಕಾರ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಇದೀಗ ಮೋದಿ ಸರಕಾರ ಈ ಕಾಯ್ದೆಗಳನ್ನು ರದ್ದುಪಡಿಸುವಂತೆ ರೈತರು ಒತ್ತಡ ತರಲಿದ್ದಾರೆ" ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News