ಇಂಗ್ಲೆಂಡ್‌ಗೆ ಜಯ : ಬೈರ್‌‌ ಸ್ಟೋವ್ ಔಟಾಗದೆ 86 ರನ್

Update: 2020-11-28 18:28 GMT

ಕೇಪ್‌ಟೌನ್: ಇಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ 5 ವಿಕೆಟ್‌ಗಳ ಜಯ ಗಳಿಸಿದೆ.

ನ್ಯೂಲ್ಯಾಂಡ್ಸ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 180 ರನ್ ಗಳಿಸಬೇಕಿದ್ದ ಇಂಗ್ಲೆಂಡ್ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 183 ರನ್ ಗಳಿಸಿತು.

ಜಾನಿ ಬೈರ್‌ಸ್ಟೋವ್ ಔಟಾಗದೆ 86 ರನ್ (48ಎ, 9ಬೌ, 4ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಜಾರ್ಜ್ ಲಿಂಡೆ (20ಕ್ಕೆ 2) ಮತ್ತು ಲುಂಗಿ ಗಿಡಿ (31ಕ್ಕೆ 2) ದಾಳಿಗೆ ಸಿಲುಕಿ ಇಂಗ್ಲೆಂಡ್‌ನ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಹಾದಿ ಹಿಡಿದಾಗ ಜಾನಿ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ತಂಡವನ್ನು ಆಧರಿಸಿದರು.

   ಜಾಸನ್ ರಾಯ್(0), ಜೋಸ್ ಬಟ್ಲರ್ (7) ಮತ್ತು ಡೇವಿಡ್ ಮಲಾನ್(19) ನಿರ್ಗಮನದೊಂದಿಗೆ ಇಂಗ್ಲೆಂಡ್‌ನ ಸ್ಕೋರ್ 5.3 ಓವರ್‌ಗಳಲ್ಲಿ 34ಕ್ಕೆ ತಲುಪಿದಾಗ ಬೈರ್ ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಜೊತೆಯಾದರು. ಇವರು ನಾಲ್ಕನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನೀಡಿದರು. ಬೆನ್ ಸ್ಟೋಕ್ಸ್ 37 ರನ್ ಗಳಿಸಿ ಶಂಸಿಗೆ ವಿಕೆಟ್ ಒಪ್ಪಿಸಿದರು. ನಾಯಕ ಇಯಾನ್ ಮೊರ್ಗನ್ 12 ರನ್ ಗಳಿಸಿ ಔಟಾದರು. ಬೈರ್ ಸ್ಟೋವ್ ಮತ್ತು ಸ್ಯಾಮ್ ಕರ್ರನ್(ಔಟಾಗದೆ 7) ಜೊತೆಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು. ಮೊದಲ ವಿಕೆಟ್‌ನ್ನು ದಕ್ಷಿಣ ಆಫ್ರಿಕಾ ಬೇಗನೆ ಕಳೆದುಕೊಂಡಿತು. ಆದರೆ ಅನುಭವಿ ಎಫ್ ಡು ಪ್ಲೆಸಿಸ್ (40 ಎಸೆತಗಳಲ್ಲಿ 58) ನೆಲಕ್ಕೆ ಅಂಟಿಕೊಂಡು ಆಡಿದರು. ಅವರು ವಿಶೇಷವಾಗಿ ಟಾಮ್ ಕುರ್ರನ್ (4-0-55-1) ಅವರನ್ನು ದಂಡಿಸಿದರು. ಅವರ ಒಂದೇ ಓವರ್‌ನಲ್ಲಿ 24 ರನ್ ಕಬಳಿಸಿದರು. ಆದರೆ ಅವರ ಸಹೋದರ ಸ್ಯಾಮ್ ಕುರ್ರನ್ (28ಕ್ಕೆ 3) ಯಶಸ್ಸು ಗಳಿಸಿದರು. ಕ್ವಿಂಟನ್ ಡಿ ಕಾಕ್ (23 ಎಸೆತಗಳಲ್ಲಿ 30) ಮತ್ತು ರಾಸ್ಸಿ ವಾನ್ ಡೆರ್ ಡುಸೆನ್ (28 ಎಸೆತಗಳಲ್ಲಿ 37) ಸಹ ತವರು ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News