ಭಾರತದ ಗಡಿಯಲ್ಲಿ ಚೀನಾದಿಂದ ನಿರಂತರ ನಿರ್ಮಾಣ ಚಟುವಟಿಕೆ ಪ್ರಚೋದಕ ಕ್ರಮ: ಅಮೆರಿಕನ್ ಸಂಸದ

Update: 2020-11-29 15:38 GMT
Photo: twitter.com/RajaForCongress

ವಾಷಿಂಗ್ಟನ್,ನ.29: ಪೂರ್ವ ಲಡಾಖ್‌ನ ಭಾರತೀಯ ಗಡಿಯಲ್ಲಿ ಚೀನಾ ತನ್ನ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಿದೆ ಎಂಬ ವರದಿಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಅಮೆರಿಕದ ಪ್ರಭಾವಿ ಡೆಮಾಕ್ರಟಿಕ್ ಸಂಸದ ರಾಜಾ ಕೃಷ್ಣಮೂರ್ತಿ ಅವರು, ಈ ವರದಿಗಳು ನಿಜವೇ ಆಗಿದ್ದರೆ ಅದು ಚೀನಾದಿಂದ ತಳಮಟ್ಟದಲ್ಲಿ ಯಥಾಸ್ಥಿತಿಯನ್ನು ಬದಲಿಸುವ ಇನ್ನೊಂದು ಪ್ರಚೋದಕ ಕ್ರಮವಾಗುತ್ತದೆ ಮತ್ತು ಅದು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ವರ್ತಿಸುತ್ತಿರುವ ರೀತಿಗೆ ಅನುಗುಣವಾಗಿರುತ್ತದೆ ಎಂದು ಹೇಳಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ಆರಂಭವಾಗಿರುವ ಮಿಲಿಟರಿ ಬಿಕ್ಕಟ್ಟು ಈಗಲೂ ಮುಂದುವರಿದಿದೆ. ದಕ್ಷಿಣ ಚೀನಾ ಪ್ರದೇಶದಲ್ಲಿಯೂ ಚೀನಾ ದುಂಡಾವರ್ತನೆಯನ್ನು ಮೆರೆಯುತ್ತಿದೆ. ಅಲ್ಲಿ ಅದು ದ್ವೀಪಗಳನ್ನು ನಿರ್ಮಿಸುತ್ತಿದೆ. ನಮಗೆ ಗೊತ್ತಿರುವ ನೈಜ ಸ್ಥಿತಿಗಳನ್ನು ಬದಲಿಸಲು ಪ್ರಯತ್ನಿಸುತ್ತಿದೆ ಮತ್ತು ಆ ಪ್ರದೇಶದಲ್ಲಿ ತೀವ್ರ ತೊಂದರೆಗಳನ್ನು ಸೃಷ್ಟಿಸುತ್ತಿದೆ ಎಂದು ಅಮೆರಿಕ ಸಂಸತ್‌ನ ಬೇಹು ಕುರಿತು ಕಾಯಂ ಆಯ್ಕೆ ಸಮಿತಿಯ ಸದಸ್ಯರಾಗಿರುವ ಮೊದಲ ಭಾರತೀಯ ಅಮೆರಿಕನ್ ಕೃಷ್ಣಮೂರ್ತಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಉಪಗ್ರಹ ಚಿತ್ರಗಳನ್ನೊಳಗೊಂಡ ವರದಿಗಳು ಚೀನಿ ನಿರ್ಮಾಣ ಚಟುವಟಿಕೆಗಳ ಬಗ್ಗೆ ಮಾಹಿತಿಯ ತನ್ನ ಮೂಲಗಳಾಗಿವೆ ಎಂದರು.

ಇಲಿನಾಯ್ಸ್ ನಿಂದ ಸತತ ಮೂರನೇ ಬಾರಿಗೆ ಕಾಂಗ್ರೆಸ್‌ಗೆ ಪುನರಾಯ್ಕೆಯಾಗಿರುವ ಕೃಷ್ಣಮೂರ್ತಿ, ಅಮೆರಿಕವು ಭಾರತಕ್ಕೆ ಬೆಂಬಲವಾಗಿರಲಿದೆ ಎಂದರು.

ಅಮೆರಿಕದ ಕಾಂಗ್ರೆಸ್ ಟ್ರಂಪ್ ಆಡಳಿತದಲ್ಲಿಯೂ ಭಾರತೀಯ ಪಾಲುದಾರರು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಜೊತೆಯಲ್ಲಿ ನಿಂತಿತ್ತು ಮತ್ತು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿಯೂ ಕಾಂಗ್ರೆಸ್‌ನ ಈ ನಿಲುವು ಮುಂದುವರಿಯಲಿದೆ ಎಂದ ಅವರು,ಇತ್ತೀಚೆಗೆ ಅಂತ್ಯಗೊಂಡ ಭಾರತ,ಜಪಾನ್,ಆಸ್ಟ್ರೇಲಿಯಾ ಮತ್ತು ಅಮೆರಿಕಾ ಸೇರಿದಂತೆ ನಾಲ್ಕು ಕ್ವಾಡ್ ರಾಷ್ಟ್ರಗಳ ಮಲಬಾರ್ ಸಮರಾಭ್ಯಾಸವು ಇಂಡೋ-ಪೆಸಿಫಿಕ್ ಪ್ರದೇಶದ ಪ್ರಜಾಪ್ರಭುತ್ವ ದೇಶಗಳು ಪರಸ್ಪರ ಬೆಂಬಲವನ್ನು ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಗಾಗಿ ಒತ್ತಾಯವನ್ನು ಮುಂದುವರಿಸಲಿವೆ ಎನ್ನುವುದಕ್ಕೆ ಸಂಕೇತವಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷ್ಣಮೂರ್ತಿ, ಬೈಡನ್ ಅವರು ಭಾರತದ ದೀರ್ಘಕಾಲಿಕ ಸ್ನೇಹಿತರಾಗಿದ್ದಾರೆ ಮತ್ತು ನಿಯೋಜಿತ ಉಪಾಧ್ಯಕ್ಷೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರೊಂದಿಗೆ ಭಾರತಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ನಿಯೋಜಿತ ವಿದೇಶಾಂಗ ಸಚಿವ ಆ್ಯಂಥನಿ ಬ್ಲಿಂಕೆನ್ ಅವರೂ ಭಾರತದ ದೀರ್ಘಕಾಲಿಕ ಮಿತ್ರನಾಗಿದ್ದಾರೆ. ಅವರಿಗೆ ಈ ಪ್ರದೇಶವು ಚೆನ್ನಾಗಿ ಗೊತ್ತಿದೆ. ಬ್ಲಿಂಕೆನ್ ಅವರು ಬೈಡನ್ ಮತ್ತು ಹ್ಯಾರಿಸ್ ಅವರೊಂದಿಗೆ ಸೇರಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಹೊಸ ಎತ್ತರಕ್ಕೆ ಒಯ್ಯಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದು ತಿಳಿಸಿದರು.

ಪ್ರದೇಶದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ಮತ್ತು ಚೀನಾ ಸೇರಿದಂತೆ ನೆರೆಯ ಯಾವುದೇ ದೇಶದ ಮಿಲಿಟರಿ ಕ್ರಮವನ್ನು ವಿರೋಧಿಸುವ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಅಧ್ಯಕ್ಷರ ಈವರೆಗಿನ ನಿಲುವನ್ನು ಬೈಡನ್,ಹ್ಯಾರಿಸ್ ಮತ್ತು ಬ್ಲಿಂಕೆನ್ ಮುಂದುವರಿಸಲಿದ್ದಾರೆ ಎಂದರು.

ಕೋವಿಡ್-19 ಸಾಂಕ್ರಾಮಿಕವನ್ನು ನಿವಾರಿಸುವುದು ಭಾರತ ಮತ್ತು ಅಮೆರಿಕಗಳ ಪ್ರಥಮ ಆದ್ಯತೆಯಾಗಬೇಕಿದೆ ಎಂದು ಹೇಳಿದ ಕೃಷ್ಣಮೂರ್ತಿ, ‘ಈ ಪಿಡುಗನ್ನು ಸೋಲಿಸಲು ಭಾರತ, ಅಮೆರಿಕ ಮತ್ತು ವಿಶ್ವಾದ್ಯಂತದ ನಮ್ಮೆಲ್ಲ ಪಾಲುದಾರ ಮತ್ತು ಮಿತ್ರರಾಷ್ಟ್ರಗಳನ್ನೊಳಗೊಂಡ ಜಾಗತಿಕ ಆರೋಗ್ಯ ಸಹಭಾಗಿತ್ವವು ನಿರ್ಣಾಯಕವಾಗಿದೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News