ಮರಾಠ ಅಭಿವೃದ್ಧಿ ನಿಗಮಕ್ಕೆ ವಿರೋಧ: ಸರಕಾರದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Update: 2020-11-30 14:23 GMT

ಬೆಂಗಳೂರು, ನ.30: ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯುವ ಸಂಬಂಧ ಸರಕಾರಕ್ಕೆ ಗಡುವು ನೀಡಿದ್ದರೂ ಪ್ರತಿಕ್ರಿಯಿಸದಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದಲ್ಲಿಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕಪ್ಪುಪಟ್ಟಿ ಧರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರಕ್ಕೆ ಕನ್ನಡಿಗರ ಭಾವನೆಗಳಿಗೆ ಸ್ವಲ್ಪವೂ ಬೆಲೆ ಕೊಡುತ್ತಿಲ್ಲ. ಮುಖ್ಯಮಂತ್ರಿಯು ಮರಾಠಿಗರ ಕುರಿತು ತೋರುತ್ತಿರುವ ಒಲವು ಕನ್ನಡಿಗರ ಬಗ್ಗೆ ತೋರುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸರಕಾರವು ಮರಾಠ ಅಭಿವೃದ್ಧಿ ನಿಗಮವನ್ನು ಕೂಡಲೇ ಹಿಂಪಡೆಯಬೇಕು. ಡಿ.30 ರೊಳಗೆ ಮುಖ್ಯಮಂತ್ರಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಸರಕಾರ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೌಜನ್ಯಕ್ಕಾದರೂ ಪರಿಶೀಲಿಸುತ್ತೇವೆ ಎಂಬ ಮಾತನ್ನೂ ಹೇಳಿಲ್ಲ ಎಂದು ದೂರಿದರು.

ಸರಕಾರ ಪ್ರಾಮಾಣಿಕವಾಗಿ ಚಿಂತನೆ ಮಾಡಲಿಲ್ಲ. ರಾಜ್ಯದಲ್ಲಿ ಏನೇ ನಡೆದರೂ ನಾವು ನಿಗಮ ರದ್ದು ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಲವು ಮಂತ್ರಿಗಳು, ಎಂಪಿಗಳು ಹೇಳಿದರೂ ಸಿಎಂ ಅವರ ಮಾತಿಗೆ ಬಗ್ಗಿಲ್ಲ. ಇದು ಕನ್ನಡಿಗರಿಗೆ ಮಾಡಿದ ಮಹಾ ದ್ರೋಹ ಎಂದರು.

ಮುಖ್ಯಮಂತ್ರಿಗಳೇ ಬಂದ್ ವಿಫಲಗೊಳಿಸುತ್ತಿದ್ದಾರೆ. ಬಂದ್ ಮಾಡದಂತೆ ಖುದ್ದು ತಡೆಯುತ್ತಿದ್ದಾರೆ. ಇದು ಕನ್ನಡಿಗರ ಬಂದ್. ಡಿ.5 ಕ್ಕೆ ಎಲ್ಲರೂ ಭಾಗಿಯಾಗಬೇಕು. ಇಲ್ಲವಾದರೆ ಎಲ್ಲಾ ಭಾಷಿಗರಿಗೂ ನಾವು ನಮ್ಮ ರಾಜ್ಯ ಕೊಡಬೇಕಾಗತ್ತದೆ. ಅಂದು ಯಾರೇನು ಮಾಡಿದರೂ ಬಂದ್ ಆಗೇ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ, ಚಿತ್ರಮಂದಿರಗಳು ಮುಚ್ಚಲಿವೆ. ಲಾರಿ, ಬಸ್, ವ್ಯಾಪಾರಿಗಳು ಎಲ್ಲಾ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮಾತನಾಡಿ, ಸರಕಾರ ಪೊಲೀಸ್ ಇಲಾಖೆ ಬಳಸಿಕೊಂಡು ನಮ್ಮ ಮೇಲೆ ಬಲಪ್ರಯೋಗ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಕಣ್ಣು, ಕಿವಿ ಇಲ್ಲ. ಹೃದಯ ಮೊದಲೇ ಇಲ್ಲ. ಮರಾಠ ನಿಗಮ ಮಾಡಿ ನಮ್ಮ ಕನ್ನಡಿಗರಿಗೆ ಮೋಸ ಮಾಡಿದ್ದಾರೆ. ಸಮುದಾಯ ಪ್ರಾಧಿಕಾರ ಮಾಡಲು ನಮ್ಮ ವಿರೋಧ ಇಲ್ಲ. ಆದರೆ, ಮರಾಠಿಗರ ಪ್ರಾಧಿಕಾರ ಯಾಕೆ ಮಾಡುತ್ತೀರಾ..? ನಾಳೆಯಿಂದ ತಮಿಳಿಗರು, ಗುಜರಾತಿಗರು ಕೇಳ್ತಾರೆ, ಆಗ ಅವರಿಗೂ ಪ್ರಾಧಿಕಾರ ಮಾಡ್ತೀರಾ..? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News