ದೇಶದಲ್ಲಿ ನವೆಂಬರ್ ಕೋವಿಡ್ ಪ್ರಕರಣ ನಾಲ್ಕು ತಿಂಗಳಲ್ಲೇ ಕನಿಷ್ಠ

Update: 2020-12-01 03:53 GMT

ಹೊಸದಿಲ್ಲಿ, ಡಿ.1: ದೇಶದಲ್ಲಿ ನವೆಂಬರ್ ತಿಂಗಳಿನಲ್ಲಿ 12.8 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ನಾಲ್ಕು ತಿಂಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಅಂತೆಯೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದು ತಿಂಗಳಲ್ಲಿ ಕನಿಷ್ಠ ಎನಿಸಿದೆ.

ನವೆಂಬರ್ ತಿಂಗಳಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15,494. ಇದು ಅಕ್ಟೋಬರ್‌ನಲ್ಲಿ ದಾಖಲಾದ 23,472ಕ್ಕೆ ಹೋಲಿಸಿದರೆ ತೀರಾ ಕಡಿಮೆ. ಜೂನ್‌ನಲ್ಲಿ ಸೋಂಕಿನಿಂದ 11,988 ಮಂದಿ ಮೃತಪಟ್ಟಿದ್ದನ್ನು ಹೊರತುಪಡಿಸಿದರೆ ಆ ಬಳಿಕ ಐದು ತಿಂಗಳಲ್ಲಿ ದಾಖಲಾದ ಕನಿಷ್ಠ ಸಂಖ್ಯೆ ಇದಾಗಿದೆ ಎನ್ನುವುದು ರಾಜ್ಯ ಸರಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಹಿಂದಿನ ತಿಂಗಳಿಗೆ ಹೋಲಿಸಿದರೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇಕಡ 32ರಷ್ಟು ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 18.8 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದವು. ಸೆಪ್ಟಂಬರ್‌ನಲ್ಲಿ ಗರಿಷ್ಠ ಅಂದರೆ 26.2 ಲಕ್ಷ ಪ್ರಕರಣ ದಾಖಲಾದ ಬಳಿಕ ಸತತ ಎರಡು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಅಂತೆಯೇ ಸೆಪ್ಟಂಬರ್‌ನಲ್ಲಿ 33,255 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಆ ಬಳಿಕ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News