ಪುತ್ರಿಯ ಮೇಲೆ ಹಲ್ಲೆಗೆ ಸುಪಾರಿ ನೀಡಿದ ತಂದೆ: ದೂರು ದಾಖಲು

Update: 2020-12-01 12:34 GMT

ಬೆಂಗಳೂರು, ಡಿ.1: ಪತ್ನಿಗೆ ವಿಚ್ಛೇದನ ನೀಡಲು ಅಡ್ಡಿಪಡಿಸಿದ ಪುತ್ರಿ ಮೇಲೆ ಹಲ್ಲೆಗೆ ತಂದೆಯೇ ಸಹಚರರಿಗೆ ಸುಪಾರಿ ಕೊಟ್ಟಿರುವ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಂಕರಪುರ ನಿವಾಸಿಯಾಗಿರುವ ರಿಯಾ ಎಂಬವರು ತನ್ನ ತಂದೆ ರವಿ ಎಂಬವರ ವಿರುದ್ಧ ದೂರು ನೀಡಿದ್ದು, ನನ್ನ ಮೇಲೆ ಹಲ್ಲೆ ನಡೆಸಲು ಸಹಚರರಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ನ.24ರಂದು ರಿಯಾ ತನ್ನ ಸ್ನೇಹಿತರೊಂದಿಗೆ ಬಸವನಗುಡಿಯಿಂದ ಹೆಣ್ಣೂರು ಮಾರ್ಗವಾಗಿ ಕಾರಿನಲ್ಲಿ ಪಾಟರಿ ರಸ್ತೆಗೆ ತಲುಪುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರು ಬಳಿ ಬಂದಿದ್ದಾನೆ. ಆತನನ್ನು ಕಂಡು ಕಾರಿನ ಗಾಜು ಇಳಿಸಿದಾಗ ಆತ ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದುಕೊಂಡಿದ್ದಾರೆ. ಹಲ್ಲೆ ಬಗ್ಗೆ ಪ್ರಶ್ನಿಸಿದಾಗ ನನ್ನನ್ನು ಏನೂ ಕೇಳಬೇಡಿ, ನಿಮ್ಮ ತಂದೆಯನ್ನು ಕೇಳಿ ಎಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಿಯಾ ತಾಯಿ ಆಶಾ ಹಾಗೂ ತಂದೆ ರವಿ, 23 ವರ್ಷಗಳ ಹಿಂದೆ ಮದುವೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದರು. ಇದಾದ ಬಳಿಕ ರವಿ ಅಕ್ರಮವಾಗಿ ಮತ್ತೊಂದು ಮದುವೆಯಾಗಿ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ಎನ್ನಲಾಗಿದೆ.

ಆದರೆ, ತಂದೆಗೆ ಬೇರೆ ಮಹಿಳೆ ಜೊತೆ ಮದುವೆಯಾಗಿದೆ ಎಂದು ಹೇಳಿ ಕೋರ್ಟ್ ನಲ್ಲಿ ವಿಚ್ಛೇದನ ಅರ್ಜಿ ತಿರಸ್ಕೃತವಾಗುವಂತೆ ಪುತ್ರಿ ನೋಡಿಕೊಂಡಿದ್ದರು. ಇದೇ ಕೋಪದ ಮೇಲೆ ತಾಯಿ ಆಶಾ ಹಾಗೂ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ರಿಯಾ ಆರೋಪಿಸಿದ್ದು, ಈ ಸಂಬಂಧ ತಮಗೆ ರಕ್ಷಣೆ ನೀಡುವಂತೆ ರಿಯಾ ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News