×
Ad

ಕಾಂಗ್ರೆಸ್ ನಾಯಕರಿಂದ 2.30 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಗುಳುಂ: ಅನ್ವರ್ ಮಾಣಿಪ್ಪಾಡಿ ಆರೋಪ

Update: 2020-12-01 19:39 IST

ಬೆಂಗಳೂರು, ಡಿ.1: ರಾಜ್ಯ ವಕ್ಫ್ ಬೋರ್ಡ್‍ಗೆ ಸೇರಿದ 2.30 ಲಕ್ಷ ಕೋಟಿ ರೂ.ಮೌಲ್ಯದ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಗುಳುಂ ಮಾಡಿದ್ದಾರೆ. ಈ ಪೈಕಿ ರಹ್ಮಾನ್ ಖಾನ್, ಸಿ.ಕೆ.ಜಾಫರ್ ಶರೀಫ್, ಸಿ.ಎಂ.ಇಬ್ರಾಹಿಮ್ ಸೇರಿದ್ದಾರೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದರು.

ರಾಜ್ಯ ವಕ್ಫ್ ಬೋರ್ಡ್‍ನಲ್ಲಿ ನಡೆಯುತ್ತಿದೆ ಎನ್ನಲಾದ ಹಗರಣಗಳನ್ನು ವಿರೋಧಿಸಿ ಮಂಗಳವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಕ್ಫ್ ಆಸ್ತಿಗಳಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿವೆ. ಇದರ ತೆರವಿಗಾಗಿ ಹೋರಾಟ ನಡೆಸಲಾಗುತ್ತಿದೆ. ಈ ಜಾಗವೆಲ್ಲವೂ ವಕ್ಫ್ ಮಂಡಳಿಗೆ ಸೇರಿದ್ದು. ಎರಡು ನೂರು ವರ್ಷಗಳ ಹಿಂದೆಯೇ ಇದರ ಅತಿಕ್ರಮಣ ಆಗಿದ್ದರೂ 1998ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅದರ ತೆರವು ಅನಿವಾರ್ಯ ಎಂದು ಅವರು ಹೇಳಿದರು.

ವಕ್ಫ್ ಆಸ್ತಿ ಅತಿಕ್ರಮಣದ ಕುರಿತು 2012ರ ಮಾ.26ರಂದು ಸರಕಾರಕ್ಕೆ ವರದಿ ನೀಡಲಾಗಿತ್ತು. ಅದನ್ನು ಸರಕಾರವು ಸದನದಲ್ಲಿ ಮಂಡಿಸಲಿಲ್ಲ. ಆದರೆ, ಬಿಜೆಪಿ ಸರಕಾರವು ಸಂಪುಟದಲ್ಲಿ ಮಂಡಿಸಿ, ಆರು ವಿಧೇಯಕಗಳನ್ನು ಜಾರಿಗೊಳಿಸಿದೆ. ಅದು ಮುಸ್ಲಿಮರಿಗೆ ನೀಡಿದ ಪಾರಿತೋಷಕ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು, ಪ್ರಧಾನ ಕಾರ್ಯದರ್ಶಿಗಳಾದ ಡಾ.ಅನಿಲ್ ಥಾಮಸ್, ಸೈಯ್ಯದ್ ಸಲಾಮ್, ಉಪಾಧ್ಯಕ್ಷ ಶಾಂತಕುಮಾರ್ ಕೆನಡಿ, ಚಾಂದ್ ಪಾಷ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News