ಟೊಯೋಟಾ ಕಾರ್ಖಾನೆಯ ಲಾಕ್‌ಔಟ್ ಹಿಂಪಡೆಯದಿದ್ದರೆ ವಿಧಾನಸೌಧ ಚಲೋ: ಕಾರ್ಮಿಕ ಸಂಘಟನೆಗಳಿಂದ ಎಚ್ಚರಿಕೆ

Update: 2020-12-03 11:50 GMT

ಬೆಂಗಳೂರು, ಡಿ.3:ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯು ಎರಡನೇ ಬಾರಿಗೆ ಘೋಷಿಸಿರುವ ಲಾಕ್‌ಔಟ್ ಅನ್ನು ಹಿಂಪಡೆಯಬೇಕು ಹಾಗೂ ಅಮಾನತುಗೊಳಿಸಿರುವ ಎಲ್ಲ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಯು ಒತ್ತಾಯಿಸಿದೆ.

ಈ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೊಯೋಟಾ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ಹಿಂಸೆ, ಅನ್ಯಾಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ 40ಕ್ಕೂ ಅಧಿಕ ಕಾರ್ಮಿಕ ಮುಖಂಡರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಅಪಾದಿಸಿದರು.

ಕಾರ್ಖಾನೆಯಲ್ಲಿ ಕೆಲಸದ ಅವಧಿಯಲ್ಲಿ ತೀರಾ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಎರಡು ಗಂಟೆ ನಿರಂತರ ಕೆಲಸದ ಬಳಿಕ ಕೇವಲ 10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಈ ಅವಧಿ ನೀರು ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಸಮಯವೂ ಸಾಲದು. ಮಧ್ಯದಲ್ಲಿ ನೀರು ಕುಡಿಯಬೇಕಾಗಿ ಹೋದರೆ ವೇತನದಿಂದ ಕಡಿತ ಮಾಡುತ್ತಾರೆ. ಅಲ್ಲದೇ ಕೆಲಸದ ಒತ್ತಡ ಹೆಚ್ಚಾಗಿದ್ದು, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ದೂರಿದರು.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪ್ರಶ್ನಿಸಿದ್ದಕ್ಕೆ ಅಮಾನತುಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೆವು. ಆ ವೇಳೆ ಏಕಾಏಕಿ ನ.9ರಂದು ಕಾರ್ಖಾನೆಯಲ್ಲಿ ಲಾಕ್‌ ಔಟ್ ಘೋಷಿಸಿದರು. ಅನಂತರ ಸರಕಾರಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ, ಲಾಕ್‌ ಔಟ್ ಹಿಂಪಡೆಯುವುದಾಗಿ ಹೇಳಿದ್ದರು. ಆದರೆ, ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕರನ್ನು ಒಳಗೆ ಬಿಟ್ಟುಕೊಳ್ಳದೇ ಎರಡನೇ ಬಾರಿಗೆ ಲಾಕ್‌ ಔಟ್ ಅನ್ನು ಘೋಷಿಸಿದೆ ಎಂದು ಆಪಾದಿಸಿದರು.

ವಿಧಾನಸೌಧ ಚಲೋ: ಸರಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಖಾನೆಯನ್ನು ಮತ್ತೊಂದು ಬಾರಿ ಲಾಕ್ ಔಟ್ ಘೋಷಿಸಿರುವುದು ಅಕ್ರಮವಾಗಿದೆ. ಹೀಗಾಗಿ, ಕಾರ್ಖಾನೆಯ ಆಡಳಿತ ಮಂಡಳಿಯು ಕೂಡಲೇ ಲಾಕ್ ಔಟ್ ಅನ್ನು ಹಿಂಪಡೆಯಬೇಕು ಹಾಗೂ ಹೊರಗಿಟ್ಟಿರುವ ಎಲ್ಲ ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರ ಬಿಡದಿಯಿಂದ ವಿಧಾನಸೌಧ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಟೊಯೋಟಾ ಕಾರ್ಖಾನೆಯು ಕಾರ್ಮಿಕರನ್ನು ಯಂತ್ರಗಳಂತೆ ಬಳಸಿಕೊಳ್ಳುತ್ತಿದೆ. ಮನುಷ್ಯತ್ವವಿಲ್ಲದೇ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಶ್ನಿಸುವವರು ಏಕಾಏಕಿ ಹೊರಗೆ ಹಾಕುವ ಮೂಲಕ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸರಕಾರದ ಸಹಕಾರದಿಂದ ಕಾರ್ಖಾನೆಯನ್ನು ಸ್ಥಾಪಿಸಿರುವ ಬಂಡವಾಳಶಾಹಿಯೊಬ್ಬರು ಸರಕಾರದ ಆದೇಶವನ್ನೇ ಉಲ್ಲಂಘಿಸಿ ಸರ್ವಾಧಿಕಾರತ್ವವನ್ನು ಪ್ರದರ್ಶಿಸುತ್ತಿದ್ದಾರೆ. ಇಷ್ಟಾದರೂ ಸರಕಾರವು ಕೇವಲ ಆದೇಶವನ್ನು ನೀಡಿ, ಮೌನಕ್ಕೆ ಶರಣಾಗಿದ್ದು, ಪರೋಕ್ಷವಾಗಿ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ಎಲ್ಲರನ್ನೂ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಹಾಗೂ ಲಾಕ್‌ ಔಟ್ ಅನ್ನು ವಾಪಸ್ ಪಡೆಯಬೇಕು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News