ಕನಕದಾಸರ ಆಶಯದಂತೆ ಸರ್ವಜನಾಂಗಕ್ಕೂ ಸಮಾನ ಅವಕಾಶ: ಸಿಎಂ ಯಡಿಯೂರಪ್ಪ

Update: 2020-12-03 11:31 GMT

ಬೆಂಗಳೂರು, ಡಿ.3: ದಾಸಶ್ರೇಷ್ಠ ಕನಕದಾಸರ ಸಮಾನತೆಯ ಆಶಯದಂತೆ ನಮ್ಮ ಸರಕಾರ ಸರ್ವಜನಾಂಗದ ಸರ್ವತೋಮುಖ ಅಭಿವೃದ್ದಿಗಾಗಿ ಸಮಾನ ಅವಕಾಶ, ಅನುದಾನ ನೀಡುತ್ತಾ ಬಂದಿದ್ದೇವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕನಕಶ್ರೀ, ಕನಕ ಗೌರವ ಪುರಸ್ಕಾರ, ಕನಕ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕನಕದಾಸರ ಸಮಾಜಮುಖಿ ನಿರ್ಮಾಣ, ಜಾತ್ಯತೀತತೆಯ ಪರಿಕಲ್ಪನೆಯೇ ನಮ್ಮ ಸರಕಾರದ ಆಶಯವಾಗಿದೆ. ಈ ದೆಸೆಯಲ್ಲಿ ಕಾರ್ಯೋನ್ಮುಖವಾಗಿದ್ದೇವೆಂದು ತಿಳಿಸಿದ್ದಾರೆ.

ಕನಕದಾಸರು ಮೌಢ್ಯಾಚರಣೆ, ಕಂದಾಚಾರಗಳ ವಿರುದ್ಧ ಸಮರ ಸಾರಿದ ಸಮಾಜ ಸುಧಾರಕರು. ದಾಸ ಸಾಹಿತ್ಯದ ಶ್ರೇಷ್ಠ ಚಿಂತಕರು. ಇವರ ಕೀರ್ತನೆಗಳು, ನೀತಿ, ತತ್ವಗಳನ್ನೊಳಗೊಂಡ ಸಾಹಿತ್ಯವು ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿವೆ. ಜಾತಿ, ಕಲ, ಧರ್ಮಗಳನ್ನು ಮೀರಿ ಚಿಂತಿಸಿದ ಕನಕದಾಸರ ಚಿಂತನೆಗಳನ್ನು ಯುವ ತಲೆಮಾರಿಗೆ ತಲುಪಿಸುವುದು ನಿಟ್ಟಿನಲ್ಲಿ ಸರಕಾರದ ಮುಖೇನ ಕನಕ ಜಯಂತಿ ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ವಿಭಾಗದ ಕಾಗಿನೆಲೆ ಮಹಾಸಂಸ್ಥಾನದ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ಕನಕದಾಸರು ಶೈವಾತೀತರು, ವೈಷ್ಣವಾತೀತರಾಗಿ ಯಾವುದೇ ಧರ್ಮ ಹಾಗೂ ಜಾತಿಗೆ ಸೀಮಿತವಾದರಲ್ಲ. ಇವರಂತೆಯೇ ಬುದ್ಧ, ಬಸವ, ಅಂಬೇಡ್ಕರ್ ರವರು ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ, ವಿಶ್ವ ಮಾನವತ್ವವನ್ನು ಜಗತ್ತಿಗೆ ಸಾರಿದವರು. ಅಂತವರ ತತ್ವಾದರ್ಶಗಳಲ್ಲಿ ನಾವೆಲ್ಲರೂ ಸಾಗೋಣವೆಂದು ತಿಳಿಸಿದರು.

ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನಾಳುವ ಸರಕಾರಗಳ ಪಾತ್ರ ದೊಡ್ಡಿದಿದೆ. ಮುಖ್ಯವಾಗಿ ಹಣಬಲ, ತೋಳ್ಬಲ ಹೊಂದಿರುವವರಿಂದ ಶೋಷಿತ ಸಮುದಾಯವನ್ನು ರಕ್ಷಿಸಿ, ಅವರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲಿ. ಸರಕಾರದ ನೇತೃತ್ವದಲ್ಲಿ ನಡೆಯುವ ಮಹಾತ್ಮರ ಜಯಂತಿಗಳು ಶೋಷಿತ ಸಮುದಾಯಕ್ಕೆ ಆತ್ಮವಿಶ್ವಾಸ ಮೂಡಿಸುವಂತಿರಲಿ ಎಂದು ಅವರು ಆಶಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪುತ್ಥಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆಯ ಯುಗಧರ್ಮ ರಾಮಣ್ಣಗೆ 2020ನೇ ಸಾಲಿನ ಕನಕಶ್ರೀ ಪ್ರಶಸ್ತಿ, ಪ್ರೊ.ಬಿ.ಶಿವರಾಮ ಶೆಟ್ಟಿ ಕನಕ ಗೌರವ ಪುರಸ್ಕಾರ, ಉಡುಪಿಯ ಡಾ.ಕಾತ್ಯಾಯಿನಿ ಕುಂಚಿಬೆಟ್ಟು ಹಾಗೂ ಬೆಂಗಳೂರಿನ ನರಸಿಂಹಮೂರ್ತಿ ಹೂವಿನಹಳ್ಳಿಗೆ ಕನಕ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಇಲಾಖೆಯ ನಿರ್ದೇಶಕ ರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಳೆದ ಎರಡು ವರ್ಷದಿಂದ ಕನಕದಾಸರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಸಂಯೋಜಕರು ನೇಮಕವಾಗಿಲ್ಲ. ಇದರಿಂದ ಸಂಸ್ಥೆಯಿಂದ ಕಾರ್ಯಚಟುವಟಿಕೆಗಳು ನಡೆಯುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸಕ್ತಿ ವಹಿಸಿ ಸಂಯೋಜಕರನ್ನು ನೇಮಕ ಮಾಡುವ ಮೂಲಕ ಕಾರ್ಯಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು.

-ಸಿದ್ದರಾಮಾನಂದ ಸ್ವಾಮೀಜಿ, ಕಲಬುರಗಿ ವಿಭಾಗದ ಕಾಗಿನೆಲೆ ಮಹಾಸಂಸ್ಥಾನದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News