ಬೆಂಗಳೂರು ಗಲಭೆ: ಬಂಧಿತ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್ ವಿರುದ್ಧ ಶಾಸಕ ಅಖಂಡ ಆಕ್ರೋಶ

Update: 2020-12-03 14:08 GMT

ಬೆಂಗಳೂರು, ಡಿ.3: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಾಜಿ ಮೇಯರ್ ಸಂಪತ್‍ರಾಜ್, ಮಾಜಿ ಕಾರ್ಪೊರೇಟರ್ ಎ.ಆರ್.ಝಾಕೀರ್ ಅವರ ವಿರುದ್ಧ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್‍ರಾಜ್, ಎ.ಆರ್.ಝಾಕೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದರೂ ಸಹ ಇನ್ನೂ ಶಿಸ್ತುಪಾಲನಾ ಸಮಿತಿ ಇದುವರೆಗೂ ಅವರಿಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿ ಅವರು ಆರೋಪಿಗಳ ವಿರುದ್ಧದ ಪ್ರಕರಣವನ್ನು ಶಿಸ್ತು ಸಮಿತಿಗೆ ವಹಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಶಿಸ್ತು ಸಮಿತಿಗೆ ಪ್ರಕರಣ ವರ್ಗಾಯಿಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನನ್ನ ಮನೆಗೆ ಸಂಬಂಧಿಸಿದ ವಿಷಯವಾಗಿದೆ. ಹೀಗಾಗಿ, ಏಕಾಂಗಿಯೇ ಇರುತ್ತೇನೆ ಎಂದರು.

ಕೆಪಿಸಿಸಿ ಶಿಸ್ತು ಸಮಿತಿ ನನ್ನ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಎಐಸಿಸಿಗೆ ಪತ್ರ ಬರೆಯುತ್ತೇನೆ. ನನಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು. ಹಾಗೆಂದು ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದರು.

ಅರವಿಂದ ಲಿಂಬಾವಳಿ ನನಗೆ ಸಂಬಂಧಿಕರು. ಹೀಗಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಬೋವಿ ಸಮಾಜದ ಗುರುಗಳೂ ಸಹ ಬೆಂಬಲಿಸಿದ್ದಾರೆ. ಆದರೂ ನನ್ನ ತಂದೆ ಕಾಲದಿಂದ ನಾವು ಕಾಂಗ್ರೆಸ್‍ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್‍ನಲ್ಲೇ ಇರುತ್ತೇವೆ ಎಂದು ಶ್ರೀನಿವಾಸ ಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News