ಇಂದು ಮೊದಲ ಟ್ವೆಂಟಿ-20 ಪಂದ್ಯ

Update: 2020-12-04 06:13 GMT

ಕ್ಯಾನ್‌ಬೆರಾ, ಡಿ. 3: ಮೊನ್ನೆಯ ತನಕ ಏಕದಿನ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದ ಆತಿಥೇಯ ಆಸ್ಟ್ರೇಲಿಯ ಹಾಗೂ ಭಾರತ ತಂಡಗಳು ಶುಕ್ರವಾರದಿಂದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಆಡಲು ಸಜ್ಜಾಗಿವೆ. ಆಟಗಾರರು ಏಕದಿನ ಕ್ರಿಕೆಟ್‌ನಿಂದ ಟಿ-20 ಮಾದರಿ ಕ್ರಿಕೆಟಿಗೆ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರರ ಕೊರತೆ ಎದುರಿಸಿದ್ದ ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದು, ಆಸ್ಟ್ರೇಲಿಯಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

1-2 ಅಂತರದಿಂದ ಏಕದಿನ ಸರಣಿಯನ್ನು ಸೋತಿರುವ ಭಾರತ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ಸಾಕಷ್ಟು ಶ್ರಮ ಹಾಕಬೇಕಾದ ಅಗತ್ಯತೆಯನ್ನು ಬೆಟ್ಟುಮಾಡಿದೆ. ಆದರೆ, ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಸಮತೋಲಿತ ತಂಡವನ್ನು ಹೊಂದಿದೆ.

 ಕೊರೋನ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗುವ ಮೊದಲು ಭಾರತವು ನ್ಯೂಝಿಲ್ಯಾಂಡ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯನ್ನು ಜಯಿಸಿತ್ತು. ಬುಧವಾರ ತಾವಾಡಿದ್ದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಾಶಿಂಗ್ಟನ್ ಸುಂದರ್, ದೀಪಕ್ ಚಹಾರ್ ಹಾಗೂ ಟಿ.ನಟರಾಜನ್ ಉಪಸ್ಥಿತಿಯಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಅಗತ್ಯವಿರುವ ಸಮತೋಲನ ಲಭಿಸಿತ್ತು.

ಸುಂದರ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಹೆಚ್ಚು ಆತ್ಮವಿಶ್ವಾಸ ಗಳಿಸಿದ್ದಾರೆ. ಪವರ್ ಪ್ಲೇ ಹಾಗೂ ಮಧ್ಯಮ ಓವರ್‌ಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಸುಂದರ್ ರನ್ನು ಸಮರ್ಥವಾಗಿ ಬಳಸಿಕೊಂಡಿದ್ದರು.

ಹಾರ್ದಿಕ್ ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ಭಾರತದಲ್ಲಿ ರವೀಂದ್ರ ಜಡೇಜ ಮಾತ್ರ ಏಕೈಕ ಸ್ಪೆಷಲಿಷ್ಟ್ ಆಲ್‌ರೌಂಡರ್ ಆಗಿದ್ದಾರೆ.

ಟಿ-20ಯಲ್ಲಿ ಕೊಹ್ಲಿಗೆ ಎರಡು ವಿಭಾಗಗಳಲ್ಲಿ ಸುಂದರ್ ಸೇವೆಯನ್ನು ಪಡೆದುಕೊಳ್ಳಲು ಅವಕಾಶವಿದೆ. ಏಕದಿನ ತಂಡಕ್ಕೆ ಕೊನೆಯ ಕ್ಷಣದಲ್ಲಿ ಸೇರ್ಪಡೆಯಾಗಿರುವ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ ಶುಕ್ರವಾರ ಟ್ವೆಂಟಿ-20 ಕ್ರಿಕೆಟ್‌ಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ.

ಮನುಕಾ ಓವಲ್ ಮೈದಾನವು ಸ್ಪಿನ್ನರ್‌ಗಳಿಗೆ ಹಾಗೂ ವೇಗದ ಬೌಲರ್‌ಗಳಿಗೆ ಸಾಕಷ್ಟು ನೆರವು ನೀಡುವ ನಿರೀಕ್ಷೆ ಇದೆ. ಜಸ್‌ಪ್ರೀತ್ ಬುಮ್ರಾರೊಂದಿಗೆ ಯಾರು ಬೌಲಿಂಗ್ ದಾಳಿ ಆರಂಭಿಸುತ್ತಾರೆಂಬ ಕುತೂಹಲವಿದೆ. ಮುಹಮ್ಮದ್ ಶಮಿ ಹಾಗೂ ದೀಪಕ್ ಚಹಾರ್ ನಡುವೆ ಈ ನಿಟ್ಟಿನಲ್ಲಿ ಸ್ಪರ್ಧೆ ಏರ್ಪಟ್ಟಿದೆ.

 ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಯಜುವೇಂದ್ರ ಚಹಾಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

 ಕೆ.ಎಲ್.ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಐದು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಶಿಖರ್ ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಫಾರ್ಮ್‌ನಲ್ಲಿರುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಾಹುಲ್ ನ್ಯೂಝಿಲ್ಯಾಂಡ್ ವಿರುದ್ಧ ಈ ಹಿಂದಿನ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಐಪಿಎಲ್‌ನಲ್ಲಿ ಆಡಿದಂತೆ 20 ಓವರ್‌ಗಳ ಸರಣಿಯಲ್ಲೂ ಸಾಕಷ್ಟು ರನ್ ಗಳಿಸುವ ನಿರೀಕ್ಷೆ ಮೂಡಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಟಚ್‌ನಲ್ಲಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಸ್ಕೋರ್ ಗಳಿಸುವ ಗುರಿ ಇರಿಸಿಕೊಂಡಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿನ ಫಲಿತಾಂಶವು ಟ್ವೆಂಟಿ-20 ಸರಣಿಗಿಂತ ಮೊದಲು ನಮಗೆ ಅವಶ್ಯವಾಗಿ ಬೇಕಾಗಿತ್ತು ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

 ಏಕದಿನ ತಂಡವನ್ನೇ ಟ್ವೆಂಟಿ-20ಗೂ ಆಯ್ಕೆ ಮಾಡಿರುವ ಆಸ್ಟ್ರೇಲಿಯ ತಂಡ ಆಟಗಾರರ ಗಾಯದ ಸಮಸ್ಯೆಯಿದ್ದರೂ ಭಾರತ ವಿರುದ್ಧ ಕಳೆದ ವಾರ ಭರ್ಜರಿ ಪ್ರದರ್ಶನ ನೀಡಿದೆ. ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಟ್ವೆಂಟಿ-20 ಸರಣಿಗೆ ಲಭ್ಯವಿಲ್ಲ. ವಾರ್ನರ್ ಅನುಪಸ್ಥಿತಿಯಲ್ಲಿ ಮಾರ್ನಸ್ ಲ್ಯಾಬುಶೇನ್ ನಾಯಕ ಆ್ಯರೊನ್ ಫಿಂಚ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಮಾರ್ಕಸ್ ಸ್ಟೋನಿಸ್ ಇನ್ನೋರ್ವ ಆರಂಭಿಕ ಆಟಗಾರನಾಗಿದ್ದಾರೆ. ಆದರೆ ಏಕದಿನ ಪಂದ್ಯದ ವೇಳೆ ಸ್ಟೋನಿಸ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಟ್ವೆಂಟಿ-20ಯಲ್ಲಿ ಇನಿಂಗ್ಸ್ ಆರಂಭಿಸುವುದು ಅನುಮಾನ. ಬುಧವಾರದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯದ ಬೌಲಿಂಗ್ ದಾಳಿಗೆ ಬಲ ತುಂಬಲಿದ್ದಾರೆ.

ಪಿಚ್ ಹಾಗೂ ವಾತಾವರಣ

ಈ  ಪಂದ್ಯವು ಗರಿಷ್ಠ ರನ್‌ಗಳ ಹಣಾಹಣಿಯಾಗುವ ನಿರೀಕ್ಷೆಯಿದೆ. ಬಿಬಿಎಲ್ ಟ್ವೆಂಟಿ-20 ಲೀಗ್‌ನಲ್ಲಿ ಇತರ ಎಲ್ಲ ಮೈದಾನಕ್ಕಿಂತ ಮನುಕಾ ಓವಲ್ ನಲ್ಲಿ ಗರಿಷ್ಠ ರನ್ ರೇಟ್(8.56)ದಾಖಲಾಗಿತ್ತು. ಈ ಮೈದಾನವು ಕಳೆದ ವರ್ಷ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆತಿಥ್ಯವಹಿಸಿತ್ತು. ಆತಿಥೇಯ ತಂಡ 151 ರನ್ ಗುರಿಯನ್ನು ಸುಲಭವಾಗಿ ಚೇಸಿಂಗ್ ಮಾಡಿತ್ತು. ಕ್ಯಾನ್‌ಬೆರಾದ ವಾತಾವರಣ ತಿಳಿಯಾಗಿದೆ.

ಅಂಕಿ ಅಂಶ

►ಉಭಯ ದೇಶಗಳು 20 ಟ್ವೆಂಟಿ-20 ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತವು 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತದಲ್ಲಿ ನಡೆದಿದ್ದ ಕಳೆದ ಸರಣಿಯಲ್ಲಿ ಆಸ್ಟ್ರೇಲಿಯವು 2-0 ಅಂತರದಿಂದ ಟಿ-20 ಸರಣಿಯನ್ನು ಗೆದ್ದಿದ್ದರೂ 20 ಓವರ್ ಕ್ರಿಕೆಟ್‌ನಲ್ಲಿ ಭಾರತವೇ ಫೇವರಿಟ್ ಆಗಿದೆ.

►2019ರ ಬಳಿಕ ಆಸ್ಟ್ರೇಲಿಯವು ಟಿ-20ಯಲ್ಲಿ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿದೆ.

ಪಂದ್ಯದ ಸಮಯ: ಅಪರಾಹ್ನ 1.40

ತಂಡಗಳು

►ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್(ಉಪನಾಯಕ-ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್),ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹಾರ್, ಟಿ.ನಟರಾಜನ್.

►ಆಸ್ಟ್ರೇಲಿಯ: ಆ್ಯರೊನ್ ಫಿಂಚ್(ನಾಯಕ), ಸಿಯಾನ್ ಅಬಾಟ್, ಅಶ್ಟನ್ ಅಗರ್, ಅಲೆಕ್ಸ್ ಕಾರೆ, ಪ್ಯಾಟ್ ಕಮಿನ್ಸ್(ಉಪ ನಾಯಕ), ಕ್ಯಾಮರೂನ್ ಗ್ರೀನ್, ಜೋಶ್ ಹೇಝಲ್‌ವುಡ್, ಮೊಸೆಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್, ಆರ್ಕಿ ಶಾರ್ಟ್, ಆ್ಯಡಮ್ ಝಾಂಪ.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News