ಡಿ.20ರಿಂದ ಜ.2ರ ವರೆಗೆ ಸಭೆ, ಸಮಾರಂಭಗಳಿಗೆ ನಿರ್ಬಂಧಕ್ಕೆ ಸಮಿತಿ ಶಿಫಾರಸ್ಸು : ಸಚಿವ ಡಾ.ಸುಧಾಕರ್

Update: 2020-12-04 08:53 GMT

ಬೆಂಗಳೂರು, ಡಿ. 4: ಕೊರೋನ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ಡಿ. 20ರಿಂದ 2021ರ ಜನವರಿ 2ರ ವರೆಗೆ ರಾಜ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಸೇರಿದಂತೆ ಎಲ್ಲ ರೀತಿಯ ಸಭೆ, ಸಮಾರಂಭಗಳನ್ನು ನಿಷೇಧಿಸಲು ’ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ’ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಲಹಾ ಸಮಿತಿ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರ ನೂತನ ವರ್ಷಾಚರಣೆ ಸಹಿತ ಎಲ್ಲ ರೀತಿಯ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲು ಸಮಿತಿ ಶಿಫಾರಸ್ಸು ಮಾಡಿದೆ. ಆದರೆ, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಕ್ಲಿಷ್ಟಕರ ಅವಧಿ: 2021ರ ಜನವರಿ ತಿಂಗಳ ಅಂತ್ಯದಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಬರಲಿದೆ ಎಂದು ಅಂದಾಜಿಸಲಾಗಿದೆ. ಆ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ನಿರ್ಬಂಧ: ಕೋವಿಡ್-19 ಎರಡನೇ ಅಲೆ ನಿಯಂತ್ರಿಸುವ ದೃಷ್ಟಿಯಿಂದ ಮದುವೆ ಸಮಾರಂಭಗಳಿಗೆ ತಲಾ 100 ಜನ, ಧಾರ್ಮಿಕ ಮತ್ತು ರಾಜಕೀಯ ಸಭೆ, ಸಮಾರಂಭಗಳಿಗೆ 200 ಜನ ಮತ್ತು ಅಂತ್ಯಕ್ರಿಯೆಗಳಲ್ಲಿ 50 ಜನರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲು ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News