ಬಿಬಿಎಂಪಿಯ 198 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ಮಹತ್ವದ ಆದೇಶ

Update: 2020-12-04 11:38 GMT

ಬೆಂಗಳೂರು, ಡಿ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಿಗೆ  ಚುನಾವಣೆ ನಡೆಸಲು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆರು ವಾರಗಳಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಶೀಘ್ರ ಚುನಾವಣೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ಸದಸ್ಯ ಎಂ.ಶಿವರಾಜ್, ಅಬ್ದುಲ್ ವಾಜಿದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ವಿಶ್ವಜಿತ್‍ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ, ವಾರ್ಡ್ ಗಳನ್ನು ಮರುವಿಂಗಡಣೆ ಮಾಡಿ 198ರಿಂದ 243ಕ್ಕೆ ಹೆಚ್ಚಿಸಲು ಜಾರಿಗೊಳಿಸಿದ ಕಾಯ್ದೆ ಈ ಚುನಾವಣೆಗೆ ಅನ್ವಯವಾಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಜತೆಗೆ ನಾಲ್ಕು ವಾರಗಳಲ್ಲಿ ಮೀಸಲು ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿದೆ.

ಚುನಾವಣಾ ಆಯೋಗದ ಪರ ವಾದಿಸಿದ್ದ ವಕೀಲರು, ಚುನಾವಣಾ ಆಯೋಗ ಈಗಾಗಲೇ 198 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. 2020ರ ಜೂನ್ ತಿಂಗಳಲ್ಲಿ ಸರಕಾರ ವಾರ್ಡ್ ಗಳ ಪುನರ್ ವಿಂಗಡಣೆ ಮಾಡಿದೆ. ಅದರ ಅನ್ವಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ 3 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.

ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಸರಕಾರ ಉದ್ದೇಶಪೂರ್ವಕವಾಗಿಯೇ ಚುನಾವಣೆಯನ್ನು ಮುಂದೂಡಲು ತಂತ್ರ ರೂಪಿಸಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲರ ವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳೊಳಗೆ ಚುನಾವಣೆ ದಿನಾಂಕ ಪ್ರಕಟಿಸಲು ಆಯೋಗಕ್ಕೆ ನಿರ್ದೇಶನ ನೀಡಿದೆ.

ರಾಜ್ಯ ಸರಕಾರ ವಾರ್ಡ್ ಗಳನ್ನು ಹೆಚ್ಚಿಸುವ ಸಂಬಂಧ ಅಧಿವೇಶನದಲ್ಲಿ ಮಸೂದೆಯನ್ನು ಕೂಡ ಮಂಡನೆ ಮಾಡಿ ಅಂಗೀಕಾರವನ್ನು ಪಡೆದುಕೊಂಡಿತ್ತು. ನ್ಯಾಯಾಲಯದ ಮುಂದೆ ಸರಕಾರ ವಾರ್ಡ್ ಹೆಚ್ಚಳ ಮಾಡಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ಅದಕ್ಕಾಗಿ ಕಾಲಾವಕಾಶ ಬೇಕಾಗುತ್ತದೆ ಎಂದು ತನ್ನ ವಾದ ಮಂಡಿಸಿತ್ತು.

2020 ನ.10ಕ್ಕೆ ಪಾಲಿಕೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಲು ಕೋರಿ ಮಾಜಿ ಪಾಲಿಕೆ ಸದಸ್ಯ ಶಿವರಾಜು, ಅಬ್ದುಲ್ ವಾಜಿದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಆಯೋಗ ಸಹ ಹೈಕೋರ್ಟ್ ಮೊರೆ ಹೋಗಿತ್ತು.

ಈ ಮಧ್ಯೆ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಯಿತು. ಇದನ್ನೂ ಸಹ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಈ ಮಧ್ಯೆ ಪಾಲಿಕೆ ವಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಸರಕಾರ ಕಾಯ್ದೆ ಜಾರಿಗೆ ತಂದಿತು. ಇದಕ್ಕೆ ಆಯೋಗ ಮತ್ತು ಅರ್ಜಿದಾರರು ಅಕ್ಷೇಪಿಸಿದರು. ಇದು ಚುನಾವಣೆಯನ್ನು ದೀರ್ಘಾವಧಿಗೆ ಮುಂದೂಡುವ ಪ್ರಯತ್ನ ಎಂದು ಹೈಕೋರ್ಟ್ ಹೇಳಿತ್ತು.

ಈಗಿನ 198 ವಾರ್ಡ್ ಗಳಿಗೆ ಅನುಗುಣವಾಗಿ ಮತದಾರರ ಪಟ್ಟಿ ಹಾಗೂ ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಆಯೋಗ ವಾದಿಸಿತ್ತು. ಇದೀಗ 198 ವಾರ್ಡ್ ಗಳಿಗೆ ಚುನಾವಣೆ ಮಾಡುವಂತೆ ಕೋರ್ಟ್ ಸೂಚಿಸಿರುವ ಕಾರಣ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News