'ಕರ್ನಾಟಕ ಬಂದ್‍'ಗೆ ಅನುಮತಿ ನೀಡಿಲ್ಲ: ಪೊಲೀಸ್ ಆಯುಕ್ತ ಕಮಲ್ ಪಂತ್

Update: 2020-12-04 12:27 GMT

ಬೆಂಗಳೂರು, ಡಿ.4: ಕನ್ನಡ ಸಂಘಟನೆಗಳ ಒಕ್ಕೂಟ ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್ ಸಂಬಂಧ ಯಾರೂ ಸಹ ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಬಂದ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದಕ್ಕಾಗಿ 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಅದೇ ರೀತಿ, 5 ಹೆಚ್ಚುವರಿ ಹಾಗೂ ಜಂಟಿ ಪೊಲೀಸ್ ಆಯುಕ್ತರನ್ನು ಆಯಾ ವಿಭಾಗದ ಎಸಿಪಿ ಹಾಗೂ ಇನ್‍ಸ್ಪೆಕ್ಟರ್ ಗಳು ಜೊತೆಗೆ 33 ಕೆಎಸ್‍ಆರ್‍ಪಿ, 37 ಸಿಎಆರ್ ಮತ್ತು 12 ಜನ ಡಿಸಿಪಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬಂದ್ ಹಿನ್ನೆಲೆಯಲ್ಲಿ ಯಾರು ಕೂಡ ಕಾನೂನು ಭಂಗ ಮಾಡುವಂತಿಲ್ಲ. ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದ ಅವರು, ಯಾವುದೇ ಮೆರೆವಣಿಗೆಗೂ ಅವಕಾಶ ಇರುವುದಿಲ್ಲ. ಜನಸಾಮಾನ್ಯರು ನಿರ್ಭಯವಾಗಿ ಓಡಾಡಬಹುದು. ದಿನದ ಚಟುವಟಿಕೆಗಳಲ್ಲಿ ಎಂದಿನಂತೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಸಾರಿಗೆ ಇಲಾಖೆಯ ಸಂಘಸಂಸ್ಥೆಗಳು, ನೌಕರರ ಸಂಘಟನೆಗಳು ಸಹ ಬೆಂಬಲ ಸೂಚಿಸಿಲ್ಲ. ಹಾಗಾಗಿ, ಉದ್ದೇಶಪೂರ್ವಕವಾಗಿ ಅದನ್ನು ತಡೆಯುವಂತಿಲ್ಲ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News