ಡಿ.12ರಂದು ಬೃಹತ್ ಉದ್ಯೋಗ ಮೇಳ: ಶಾಂತಾ ಕೃಷ್ಣಮೂರ್ತಿ

Update: 2020-12-04 14:27 GMT

ಬೆಂಗಳೂರು, ಡಿ.4: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿರುವುದರಿಂದ ಆ ಕುಟುಂಬಗಳು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಡಿ.12ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ತಿಳಿಸಿದರು.

ಶುಕ್ರವಾರ ರಾಮಮೂರ್ತಿನಗರದ ಎನ್‍ಆರ್‍ಐ ಲೇಔಟ್ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಐಬಿಎಂ, ಬಾಷ್, ಟೊಯೊಟಾ ಸೇರಿದಂತೆ 120ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 5,000 ಉದ್ಯೋಗಾವಕಾಶಗಳನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಫೌಂಡೇಷನ್‍ನ ಸಂಸ್ಥಾಪಕ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ಸಾಫ್ಟ್ ವೇರ್, ಹಾರ್ಡ್‍ವೇರ್, ಸೇಲ್ಸ್, ಮಾರ್ಕೆಟಿಂಗ್, ಬಿಪಿಒ, ಬ್ಯಾಂಕಿಂಗ್, ಅಕೌಂಟಿಂಗ್, ಗ್ರಾಫಿಕ್ಸ್ ಡಿಸೈನಿಂಗ್, ರೀಟೈಲ್, ಮ್ಯಾನುಫ್ಯಾಕ್ಚರಿಂಗ್, ಮ್ಯಾನೇಜ್‍ಮೆಂಟ್ ಹಾಗೂ ಇನ್ನಿತರ ವಲಯಗಳ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದರು.

ಈಗಾಗಲೆ ಸುಮಾರು 1200ಕ್ಕೂ ಹೆಚ್ಚು ಮಂದಿ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿಕೊಳ್ಳದೆ ನೇರವಾಗಿ ಬರುವವರಿಗಾಗಿ ಪ್ರತ್ಯೇಕವಾದ ಕೌಂಟರ್ ಗಳನ್ನು ಸ್ಥಾಪಿಸಿ, ಮಾರ್ಗದರ್ಶನ ನೀಡಲಾಗುವುದು. ಎನ್‍ಆರ್‍ಐ ಲೇಔಟ್‍ನಲ್ಲಿರುವ ಎಚ್‍ಡಿಎಫ್‍ಸಿ ಬ್ಯಾಂಕ್ ಮುಂಭಾಗದಲ್ಲಿ ಡಿ.12ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಈ ಉದ್ಯೋಗ ಮೇಳ ನಡೆಯಲಿದೆ ಎಂದು ಅವರು ಹೇಳಿದರು.

ಆಕಾಂಕ್ಷಿಗಳು ಮೊಬೈಲ್ ಸಂಖ್ಯೆ: 9066850012, 8884667699ಗೆ ಕರೆ, ಎಸ್‍ಎಂಎಸ್ ಅಥವಾ ವಾಟ್ಸಪ್ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು. ಇಲ್ಲವೇ ಇಮೇಲ್ ವಿಳಾಸ balc.jobfair@gmail.com ಗೆ ನಿಮ್ಮ ಸ್ವ ವಿವರವನ್ನು ಕಳುಹಿಸಬಹುದು. 7ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವವರಿಗೂ ಅವಕಾಶಗಳಿವೆ. ಉದ್ಯೋಗ ಮೇಳಕ್ಕೆ ಬರುವ ಆಕಾಂಕ್ಷಿಗಳು ತಮ್ಮೊಂದಿಗೆ ನಾಲ್ಕರಿಂದ ಐದು ಜೊತೆ ದಾಖಲಾತಿಗಳ ಪ್ರತಿಗಳನ್ನು ತಂದರೆ, ಒಂದಕ್ಕಿಂತ ಹೆಚ್ಚಿನ ಕಂಪೆನಿಗಳಿಗೆ ಸಂದರ್ಶನ ನೀಡಲು ಅನುಕೂಲವಾಗುತ್ತದೆ. ಮಹಿಳೆಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೌಂಟರ್‍ಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಧು ಗೌಡ, ಆನಂದ್‍ ಕುಮಾರ್, ಸುನಿಲ್ ಕುಮಾರ್, ಅನಿಲ್ ಕುಮರ್, ಮೈಕಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News