ರಾಜ್ಯದಲ್ಲಿ 10 ವರ್ಷ ಯಾರೇ ವಾಸವಿದ್ದರೂ ಅವರೆಲ್ಲರೂ ಕನ್ನಡಿಗರು: ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-12-04 15:18 GMT

ಬೆಂಗಳೂರು, ಡಿ. 4: ಮರಾಠಾ ಅಭಿವೃದ್ಧಿ ನಿಗಮವನ್ನು ರಾಜ್ಯದಲ್ಲಿರುವ ಮರಾಠಾ ಪ್ರಜೆಗಳ ಒಳಿತಿಗಾಗಿ ರಚನೆ ಮಾಡಲಾಗಿದೆಯೇ ಹೊರತು ಮರಾಠಿ ಭಾಷಿಕರಿಗಲ್ಲ. ಭಾಷೆಯನ್ನು ನಿಗಮಕ್ಕೆ ತಳುಕು ಹಾಕುವುದು ಸರಿಯಲ್ಲ. ಬಂದ್ ಮಾಡುವುದರಲ್ಲಿ ಅರ್ಥವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಯಾರೇ ಅಗಲಿ ಹತ್ತು ವರ್ಷ ವಾಸವಿದ್ದರೆ ಅವರೆಲ್ಲರೂ ಕಾನೂನು ಪ್ರಕಾರ ಕನ್ನಡಿಗರೇ. ಮರಾಠಾ ನಿಗಮ ಮಾಡಿರುವುದು ರಾಜ್ಯದಲ್ಲಿರುವ ಮರಾಠ ಸಮುದಾಯದ ಜನರ ಏಳಿಗೆ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಎಂದು ಸಮರ್ಥಿಸಿದರು.

ಶತಮಾನಗಳಿಂದ ಮರಾಠಿಗರು ರಾಜ್ಯದಲ್ಲಿ ನೆಲೆಸಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಈಗ ಮಾಡಲಾಗಿದೆ. ರಾಜ್ಯದಲ್ಲಿರುವ ತಮಿಳರು, ತೆಲುಗರಿಗೂ ಅಭಿವೃದ್ಧಿ ನಿಗಮ ಮಾಡಿದರೆ ತಪ್ಪೇನಿಲ್ಲವಲ್ಲ. ಹತ್ತು ವರ್ಷಗಳಿಂದ ರಾಜ್ಯದಲ್ಲಿ ಯಾರೇ ವಾಸ ಮಾಡುತ್ತಿದ್ದರೂ ಅವರೆಲ್ಲರೂ ಕನ್ನಡಿಗರೇ. ಅವರನ್ನು ಎರಡನೇ ದರ್ಜೆ ಪ್ರಜೆಗಳು ಎಂದು ಕರೆಯುವುದಾಗಲಿ ಅಥವಾ ಪರಿಗಣಿಸುವುದಾಗಲಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವ ಮಾನವ ತತ್ವ, ವಸುಧೈವ ಕುಟುಂಬಕಂ ಎಂಬ ಮಾತುಗಳನ್ನು ಬಿಜೆಪಿ ಸರಕಾರ ಸಾಕಾರ ಮಾಡುತ್ತಿದೆ. ಅದೆಲ್ಲವನ್ನು ಬರೀ ಭಾಷಣದಲ್ಲಿ ಹೇಳಿದರೆ ಸಾಲದು, ಕೃತಿಯಲ್ಲೂ ತೋರಬೇಕು ಎನ್ನುವ ಕಾರಣಕ್ಕೆ ಈ ಕ್ರಮ ಅನುಸರಿಸಲಾಗಿದೆ ಎಂದ ಅವರು, ಮರಾಠಾ ಅಭಿವೃದ್ಧಿ ನಿಗಮ ಮಾಡುವುದರಿಂದ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ ಎಂದರು.

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಎಂಇಎಸ್‍ನಂಥ ಸಂಘಟನೆಗಳು ಕೇಳುವುದನ್ನು ತಡೆಯಲು, ಅವರಿಗೆ ಅಂಥ ಪ್ರಯತ್ನ ನಡೆಸಲು ಅವಕಾಶವನ್ನೇ ನೀಡಬಾರದು ಎಂಬ ಸದುದ್ದೇಶದಿಂದ ಸರಕಾರ ಈ ಕೆಲಸ ಮಾಡುತ್ತಿದೆ ಎಂದ ಅವರು, ಬೆಳಗಾವಿ ನಮ್ಮದು. ಒಂದು ಇಂಚು ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News