ಬಿಡಿಎ ಅಕ್ರಮ ಜಾಲ ಭೇದಿಸಿದ ಜಾಗೃತದಳ: ಹಲವು ದಾಖಲೆ ಪತ್ರಗಳ ಜಪ್ತಿ

Update: 2020-12-04 15:43 GMT

ಬೆಂಗಳೂರು, ಡಿ.4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಕೆಲ ಸಿಬ್ಬಂದಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಜೊತೆಗೂಡಿ ಹಲವು ದಾಖಲೆಗಳನ್ನು ಅಕ್ರಮವಾಗಿ ತಯಾರಿಸುತ್ತಿದ್ದ ಪ್ರಕರಣವೊಂದನ್ನು ಜಾಗೃತದಳ ಭೇದಿಸಿದೆ.

ಶುಕ್ರವಾರ ನಗರ ಪೊಲೀಸರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಜಾಗೃತ ದಳದ ತನಿಖಾಧಿಕಾರಿಗಳು, ಇಲ್ಲಿನ ಕನ್ನಿಂಗ್ ಹ್ಯಾಮ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಕಚೇರಿಯ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದರು.

ತದನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಕುಮಾರ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಇದಾದ ಬಳಿಕ, ಈತ ನೀಡಿದ ಮಾಹಿತಿ ಅನ್ವಯ ಬಿಡಿಎ ಸಿಬ್ಬಂದಿ ಎನ್ನಲಾದ ರಾಜು ಎಂಬುವರ ಮನೆ ಮೇಲೆ ದಾಳಿ ನಡೆಸಿ, ಹಲವು ದಾಖಲೆ ಪತ್ರಗಳನ್ನು ಜಪ್ತಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಬಿಡಿಎಗೆ ಸಂಬಂಧಿಸಿದಂತೆ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ವಂಚನೆ ಮಾಡುವವರ ಬಗ್ಗೆ ತೀವ್ರ ನಿಗಾ ಇಟ್ಟಿದ್ದ ಜಾಗೃತ ದಳದ ತನಿಖಾಧಿಕಾರಿಗಳು, ಪ್ರಾಧಿಕಾರದ ಕೆಲ ಸಿಬ್ಬಂದಿಯ ಚಲನವಲನ ಕುರಿತು ಮಾಹಿತಿ ಸಂಗ್ರಹಿಸಿ ಈ ದಾಳಿ ನಡೆಸಿ, ಅಕ್ರಮ ಜಾಲವನ್ನು ಭೇದಿಸಿದ್ದಾರೆ.

ಆರೋಪಿಗಳು ಪ್ರಮುಖವಾಗಿ ಪ್ರಾಧಿಕಾರದ ಸ್ವತ್ತುಗಳಾದ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಮೊಹರುಗಳು, ಹಂಚಿಕೆ ಪತ್ರಗಳು, ಖಚಿತ ಅಳತೆ ವರದಿ ಇತರೆ ದಾಖಲೆಗಳನ್ನು ಖಾಸಗಿ ಕಚೇರಿಯೊಂದರಲ್ಲಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ.

ವಂಚಿಸಿದ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 409 ಮತ್ತು 468ರ ಅಡಿಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿ ಸಂದರ್ಭದಲ್ಲಿ ಬಿಡಿಎ ಆಯುಕ್ತ ಡಾ.ಮಹಾದೇವ್, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಕಿಂಗ್‍ಪಿಂಗ್?

ಬಿಡಿಎ ಉಪ ಕಾರ್ಯದರ್ಶಿ ಶಿವೇಗೌಡ ಹಾಗೂ ಇಂದ್ರಕುಮಾರ್ ಈ ಜಾಲದ ಕಿಂಗ್‍ಪಿನ್ ಎನ್ನಲಾಗಿದ್ದು, ಇವರಿಗೆ ಬಿಡಿಎ ಸಿಬ್ಬಂದಿಗಳು ಎನ್ನಲಾದ ರಾಜು, ಶರತ್‍ ಕುಮಾರ್, ಸಂಪತ್‍ ಕುಮಾರ್, ಪವಿತ್ರಮ್ಮ ಎಂಬುವರು ದಾಖಲೆ ಪತ್ರಗಳನ್ನು ತಯಾರಿಸಲು ನೆರವು ನೀಡುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News