ರೈತರ ಪ್ರತಿಭಟನೆ: ಕೆನಡಾದ ರಾಯಭಾರಿಯನ್ನು ಕರೆಸಿ ಟ್ರೂಡೊ ಹೇಳಿಕೆಗೆ ಪ್ರತಿಭಟನೆ ದಾಖಲಿಸಿದ ಭಾರತ

Update: 2020-12-04 18:31 GMT

ಹೊಸದಿಲ್ಲಿ,ಡಿ.4: ಕೆನಡಾದ ರಾಯಭಾರಿಯನ್ನು ಗುರುವಾರ ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇತರ ಕೆಲವು ನಾಯಕರು ನೀಡಿರುವ ಹೇಳಿಕೆಗಳಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ. ಈ ನಾಯಕರ ಹೇಳಿಕೆಗಳು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಗಳಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಸಚಿವರು ಮತ್ತು ಸಂಸತ್ ಸದಸ್ಯರು ಸೇರಿದಂತೆ ಕೆನಡಾದ ರಾಜಕಾರಣಿಗಳ ಹೇಳಿಕೆಗಳು ತೀವ್ರಗಾಮಿ ಚಟುವಟಿಕೆಗಳನ್ನು ಸಮರ್ಥಿಸಿವೆ ಎಂದು ಭಾರತವು ಬಣ್ಣಿಸಿದೆ.

ದೇಶದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಇಂತಹ ಕೃತ್ಯಗಳು ಮುಂದುವರಿದರೆ ಅದು ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎಂದು ಕೆನಡಾದ ರಾಯಭಾರಿಗೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

 ‘ಕೆನಡಾದ ರಾಜಕಾರಣಿಗಳ ಈ ಹೇಳಿಕೆಗಳು ಆ ದೇಶದಲ್ಲಿರುವ ನಮ್ಮ ರಾಯಭಾರಿ ಕಚೇರಿ ಮತ್ತು ದೂತಾವಾಸಗಳ ಮುಂದೆ ತೀವ್ರಗಾಮಿಗಳು ಸಮಾವೇಶಗೊಳ್ಳಲು ಉತ್ತೇಜಿಸಿದ್ದು,ಇದು ಸುರಕ್ಷತೆ ಮತ್ತು ಭದ್ರತೆಯ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ರಾಜತಾಂತ್ರಿಕ ಸಿಬ್ಬಂದಿಗಳಿಗೆ ಸಂಪೂರ್ಣ ಸುರಕ್ಷತೆಯನ್ನು ಖಚಿತ ಪಡಿಸುವ ಜೊತೆಗೆ ತನ್ನ ರಾಜಕೀಯ ನಾಯಕರು ತೀವ್ರಗಾಮಿ ಚಟುವಟಿಕೆಗಳನ್ನು ಉತ್ತೇಜಿಸುವ ಹೇಳಿಕೆಗಳಿಂದ ದೂರವಿರುವಂತೆ ಕೆನಡಾ ಸರಕಾರವು ನೋಡಿಕೊಳ್ಳುತ್ತದೆ ಎಂದು ತಾನು ನಿರೀಕ್ಷಿಸಿರುವುದಾಗಿ ಭಾರತವು ಆ ದೇಶದ ರಾಯಭಾರಿಗೆ ತಿಳಿಸಿದೆ.

ಡಿ.1ರಂದು ಗುರು ನಾನಕ್ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಟ್ರೂಡೊ ರೈತರ ದಿಲ್ಲಿ ಚಲೋ ಪ್ರತಿಭಟನೆಯನ್ನು ಪ್ರಸ್ತಾಪಿಸಿ,ತನ್ನ ದೇಶವು ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ಯಾವಾಗಲೂ ಸಮರ್ಥಿಸುತ್ತದೆ. ಪ್ರತಿಭಟನೆಗಳಿಂದಾಗಿ ಅಲ್ಲಿ ಸ್ಥಿತಿ ಕಳವಳಕಾರಿಯಾಗಿದೆ ಎಂದು ಹೇಳಿದ್ದರು.

ಭಾರತವು ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿತ್ತು. ಕೆನಡಾದ ನಾಯಕರ ಹೇಳಿಕೆಗಳು, ವಿಶೇಷವಾಗಿ ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನಗತ್ಯವಾಗಿದ್ದು,ತಪ್ಪು ಮಾಹಿತಿಗಳಿಂದ ಕೂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News